ADVERTISEMENT

ಲೆಕ್ಕ ಎಷ್ಟು ಸಾರಿ ಕೊಡಬೇಕು: ಬಿ.ಸಿ.ಪಾಟೀಲ ಪ್ರಶ್ನೆ

ನಾಲ್ವರು ಪ್ರಬುದ್ಧ ಸಚಿವರು ಲೆಕ್ಕ ನೀಡಿದರೂ ಸಮಾಧಾನವಿಲ್ಲ: ಟೀಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 16:11 IST
Last Updated 27 ಜುಲೈ 2020, 16:11 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಕೊಪ್ಪಳ: ನಾಲ್ವರು ಪ್ರಬುದ್ಧ ಸಚಿವರು ಈಗಾಗಲೇ ಜನತೆಯ ಮುಂದೆ ಲೆಕ್ಕ ಇರಿಸಿದ್ದಾರೆ. ಮತ್ತೆ ಕಾಂಗ್ರೆಸ್‌ನವರಿಗೆ ಕೊರೊನಾ ಲೆಕ್ಕ, ಲೆಕ್ಕ ಎನ್ನುವ ಮೂಲಕ ಲೆಕ್ಕದ ಹುಚ್ಚು ಹಿಡಿಸಿಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಟೀಕಿಸಿದರು.

ಅವರು ಜಿಲ್ಲಾಡಳಿತ ಭವನದಲ್ಲಿ ಸರ್ಕಾರದ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ವಿರೋಧ ಪಕ್ಷದಲ್ಲಿ ಕುಳಿತು ಮಾಡಲು ಬೇರೆ ಏನು ಕೆಲಸ ಇಲ್ಲ. ಹೀಗಾಗಿ ವಿನಾಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐವರು ಸಚಿವರು ಸಮಗ್ರ ಲೆಕ್ಕ ನೀಡಿದರೂ, ಇನ್ನೂ ಲೆಕ್ಕ, ಲೆಕ್ಕ ಅಂತ ಕೇಳ್ತಾನೆ ಇದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ, ಬಿಜೆಪಿ ಮತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಇಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅದು ಎಂದೂ ಆಗದ ಕೆಲಸ ಎಂದರು.

ADVERTISEMENT

ಜುಲೈ26ಕ್ಕೆ ಬಿಜೆಪಿ ಒಂದು ವರ್ಷದ ಆಡಳಿತ ಪೂರೈಸಿದೆ. ಈ ಒಂದು ವರ್ಷದಲ್ಲಿ ಎದುರಾದ ಸಂಕಷ್ಟ ಹಿಂದೆಂದೂ ಬಂದಿರಲಿಕ್ಕಿಲ್ಲ. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಬರ ತಾಂಡವವಾಡುತ್ತಿತ್ತು. ಅಧಿಕಾರ ವಹಿಸಿಕೊಂಡ ಕೆಲ ದಿನದಲ್ಲೇ ಅತಿವೃಷ್ಠಿ ಉಂಟಾಯಿತು. ಸಿಎಂ ಒಬ್ಬರೇ ಮುಂದೆ ನಿಂತು ನೆರೆ ಹಾವಳಿ ಸಮಸ್ಯೆಯನ್ನು ಎದುರಿಸಿದರು ಎಂದರು.

ಕೋವಿಡ್-19 ಜಗತ್ತಿಗೆ ಹೊಸದು. ಆರೋಗ್ಯ ಉಪಕರಣದ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಸಮತೋಲನ ಉಂಟಾಗಿದೆ. ಈ ಕಾರಣಕ್ಕೆ ಒಂದಷ್ಟು ಹಣ ಹೆಚ್ಚು ನೀಡಿ ಖರೀದಿ ಮಾಡಲಾಗಿದೆ. ಶೀಘ್ರವೇ ಲೆಕ್ಕ ಕುರಿತು ಬ್ಲ್ಯಾಕ್ಆಂಡ್ ವೈಟ್‍ನಲ್ಲಿ ಕೊಡಲಾಗುತ್ತೆ ಎಂದು ತಿಳಿಸಿದರು.

ಅಕ್ರಮಕ್ಕೆ ಅವಕಾಶ ನೀಡಲ್ಲ: ನನ್ನ ಹೆಸರಿನಲ್ಲಿ ಯಾರೇ, ಯಾವುದೇ ಅಕ್ರಮ ಚಟುವಟಿಕೆ ನಡೆಸಿದರೂ ಸಹಿಸಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮರಳನ್ನ ನಿಯಮಬದ್ಧವಾಗಿ ತೆಗೆದುಕೊಂಡರೆ ಸಮಸ್ಯೆ ಇಲ್ಲ. ಅಕ್ರಮವಾಗಿ ಮರಳು ಸಾಗಣೆ ಮಾಡಿದರೆ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಪೊಲೀಸ್‌ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲವಾಗಿದ್ದು, ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ ಅವರು, ಇದುಪೊಲೀಸ್‌ ಇಲಾಖೆಯ ಆಂತರಿಕ ವಿಚಾರ. ಈ ಬಗ್ಗೆಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಸಂಪರ್ಕಿಸಿ ಸಮಗ್ರ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.