
ಕಾರಟಗಿ: ‘ಭೀಮಾ ಕೋರೆಗಾಂವ್ ಯುದ್ಧ ದಮನಿತರ ಪಾಲಿಗೆ ಸ್ಪೂರ್ತಿದಾಯಕ. ಚರಿತ್ರೆಯಲ್ಲಿ ಅಡಗಿದ್ದ ವಿದ್ಯಮಾನವನ್ನು ಅಂಬೇಡ್ಕರ್ ಸ್ವಾಭಿಮಾನದ ಸಂಕೇತವನ್ನಾಗಿಸಿದರು. ಸಮಾನತೆ, ಸ್ವಾಭಿಮಾನದ ಸಂಕೇತವಾಗಿ ಭೀಮಾ ಕೋರೇಗಾಂವ್ ಸಮರ ಇಂದಿಗೂ ಸ್ಮರಣೀಯವಾಗಿ ಉಳಿದಿದೆ’ ಎಂದು ಪಟ್ಟಣದ ಸಿಎಂಎನ್ ಕಾಲೇಜ್‌ನ ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಹೇಳಿದರು.
ಪಟ್ಟಣದ ಕನಕದಾಸ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ಶುಕ್ರವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
28 ಸಾವಿರದಷ್ಟು ಸೈನಿಕರಿದ್ದ ಪೇಶ್ವೆಗಳನ್ನು 534 ಮಹಾರ್ ಸೈನಿಕರು 1818ರ ಜ.1ರಂದು ಯುದ್ಧ ಮಾಡಿ ಹೋರಾಟ ನಡೆಸಿ ಸೋಲಿಸಿದ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದರು.
ಮಹಾರ್ ಸೈನಿಕರು, ಆತ್ಮಗೌರವ, ಸ್ವಾಭಿಮಾನ, ಸಮಾನತೆಗೆ ಸಹಕಾರ ನೀಡದ ಪೇಶ್ವೆಯವರ ಸೈನಿಕರೊಂದಿಗೆ ಕೋರೆಗಾಂವ್ ಸ್ಥಳದಲ್ಲಿ ಸಿದ್ಧ ನಾಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಆತ್ಮ ಸಮ್ಮಾನ, ಸ್ವಾಭಿಮಾನದ ಯುದ್ಧ ಇದಾಗಿದೆ ಎಂದು ಸ್ಮರಿಸಿದರು.
ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ, ಉಪನ್ಯಾಸಕ ನಾಗರಾಜ್ ಹುಡೇದ್, ರೈತ ಮುಖಂಡ ಮರಿಯಪ್ಪ ಸಾಲೋಣಿ, ಎಸ್‌ಡಿಪಿಐ ಅಧ್ಯಕ್ಷ ಅಜ್ಮೀರ್ ಸಿಂಗನಾಳ, ಖಾಜಾ ಹುಸೇನ್ ಮುಲ್ಲಾ, ಶಿವಕುಮಾರ ಬೂದಗುಂಪಾ ಮಾತನಾಡಿದರು.
ಹೋರಾಟಗಾರ ಸಿರಾಜ್ ಹುಸೇನ್ ಸಿದ್ದಾಪುರ, ದಲಿತ ಸಂಘಟನೆಯ ಲಕ್ಷ್ಮಣ ಮ್ಯಾಗಡಮನಿ, ದೊಡ್ಡ ಗಾಳೇಶ ಕೆಂಗೇರಿ, ದ್ಯಾವಣ್ಣ ಗುಂಡೂರು, ತಿಮ್ಮಣ್ಣ ಬೂದುಗುಂಪ, ತಿಮ್ಮಣ್ಣ ಗುಂಡೂರು, ಮೌನೇಶ ಭಜರಂಗಿ, ಬಸವರಾಜ್ ಬಸವಣ್ಣಕ್ಯಾಂಪ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವೆಂಕೋಬ ಚಲುವಾದಿ, ಅಮ್ರುಲ್ ಹುಸೇನ್, ಶರಣಪ್ಪ ಕಾಯಿಗಡ್ಡಿ, ಅಲಿ ಹುಸೇನ್, ಅಂಬಣ್ಣ ಬುಡಗಜಂಗಮ, ಶಿವು ಮಾಸ್, ರಮೇಶ ತೊಂಡಿಹಾಳ, ಶಿವಶಂಕರ ಹಾಸ್ಟೆಲ್, ಅನಂತ್ ಜೂರಟಗಿ, ವೆಂಕಟೇಶ್ ಬೂದಿ, ಸಿಆರ್‌ಪಿ ತಿಮ್ಮಣ್ಣ ನಾಯಕ, ಪ್ರಾಚಾರ್ಯ ನಾಗರಾಜ್ ಮೈನಳ್ಳಿ, ಡಾ ರಾಮಣ್ಣ ಚಲುವಾದಿ, ಉಪನ್ಯಾಸಕ ವಿರುಪಾಕ್ಷಿ ದೇಶನೂರು, ಶಿಕ್ಷಕ ಶ್ಯಾಮಸುಂದರ್ ಇಂಜಿನಿ, ಶಿಕ್ಷಕ ಶಿವರಾಜಕುಮಾರ ಬೆನ್ನೂರು, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ ಕಿಲ್ಲೇದಾರ್ ಉಪಸ್ಥಿತರಿದ್ದರು.