ADVERTISEMENT

ಸದಾಶಿವ ವರದಿ ತಿರಸ್ಕಾರಕ್ಕೆ ಒತ್ತಾಯ

ಯಲಬುರ್ಗಾ: ಭೋವಿ, ಲಂಬಾಣಿ ಸಮಾಜದವರಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:48 IST
Last Updated 19 ಸೆಪ್ಟೆಂಬರ್ 2021, 4:48 IST
ಯಲಬುರ್ಗಾ ಪಟ್ಟಣದಲ್ಲಿ ಶನಿವಾರ ಸದಾಶಿವ ಆಯೋಗದ ವರದಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕೊರಮ ಸಮಾಜದವರು ತಮ್ಮ ವೃತ್ತಿಯ ಸಂಕೇತವಾಗಿ ಪುಟ್ಟಿಗಳನ್ನು ಪ್ರದರ್ಶಿಸಿ ಆಕ್ರೊಶ ವ್ಯಕ್ತಪಡಿಸಿದರು
ಯಲಬುರ್ಗಾ ಪಟ್ಟಣದಲ್ಲಿ ಶನಿವಾರ ಸದಾಶಿವ ಆಯೋಗದ ವರದಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕೊರಮ ಸಮಾಜದವರು ತಮ್ಮ ವೃತ್ತಿಯ ಸಂಕೇತವಾಗಿ ಪುಟ್ಟಿಗಳನ್ನು ಪ್ರದರ್ಶಿಸಿ ಆಕ್ರೊಶ ವ್ಯಕ್ತಪಡಿಸಿದರು   

ಯಲಬುರ್ಗಾ: ‘ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳನ್ನು ಒಡೆಯುವ ಎ.ಜೆ. ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿರುವುದರಿಂದ ಸರ್ಕಾರ ತಿರಸ್ಕಾರಗೊಳಿಸಬೇಕು’ ಎಂದು ಒತ್ತಾಯಿಸಿ ಭೋವಿ, ಲಂಬಾಣಿ ಹಾಗೂ ಇನ್ನಿತರ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಕುಲಕಸುಬಿನ ಸಂಕೇತವಾಗಿ ಪುಟ್ಟಿ, ಬಾರಿಗೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಸಂರಕ್ಷಣ ಒಕ್ಕೂಟವು ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ವಿವಿಧ ಸಮಾಜದ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ADVERTISEMENT

ಪರಿಶಿಷ್ಟ ಜಾತಿಗೆ ಸೇರಿದ ನೂರಕ್ಕು ಅಧಿಕ ಸಮಾಜದವರನ್ನು ಗಡೆಗಣಿಸಿ ವರದಿ ಸಲ್ಲಿಸಿರುವ ಸದಾಶಿವ ಆಯೋಗದ ವರದಿಯು ಸಮಗ್ರತೆಯಿಂದ ಕೂಡಿಲ್ಲ, ಬದಲಿಗೆ ಕೆಲವೊಂದು ಸಮುದಾಯಕ್ಕೆ ಪಾತ್ರ ಅನುಕೂಲವಾಗುವಂತಿದೆ. ಅಲ್ಲದೇ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಬಂಜಾರ,ಭೋವಿ,ಕೊರಚ,ಕೊರಮ ಸಮಾಜದವರನ್ನು ಕೈಬಿಟ್ಟು ವರದಿ ಸಿದ್ಧಗೊಳಿಸಿದ್ದಾರೆ. ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಉಮೇಶ ರಾಠೋಡ, ಪರಶುರಾಮ ನಾಯಕ, ಹನಮಂತಪ್ಪ ಭಜಂತ್ರಿ, ನಾಗಪ್ಪ ವಡ್ಡರ, ರೇವಣಪ್ಪ ಮ್ಯಾಗೇರಿ, ಹುಲಗಪ್ಪ ವಡ್ಡರ, ಪರಶುರಾಮ ಚವ್ಹಾಣ, ರವಿ ಭಜಂತ್ರಿ, ಶೇಖಪ್ಪ ಭಜಂತ್ರಿ, ಪರಸಪ್ಪ ಲಂಬಾಣಿ, ಯಮನಪ್ಪ ಲಂಬಾಣಿ, ಸುರೇಶ ಬಳೂಟಗಿ ಇದ್ದರು.

ತಹಶೀಲ್ದಾರ ಶ್ರೀಶೈಲ್ ತಳವಾರ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಪಿಎಸ್‍ಐ ಶಿವಕುಮಾರ ಮುಗ್ಗಳ್ಳಿ ಸೂಕ್ತ
ಬಂದೋಬಸ್ತ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.