ADVERTISEMENT

ಕೊಪ್ಪಳ | ಸಿಗದ ಪೊಲೀಸರ ಅನುಮತಿ: ಬೈಕ್‌ ರ್‍ಯಾಲಿ ರದ್ದು

ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:50 IST
Last Updated 21 ಜನವರಿ 2024, 6:50 IST
ಕೊಪ್ಪಳದಲ್ಲಿ ಶನಿವಾರ ಬ್ರಾಹ್ಮಣ ಸಮಾಜದ ಪ್ರಮುಖರ ಜೊತೆ ಸಿಪಿಐ ಸಂತೋಷ ಹಳ್ಳೂರ ಚರ್ಚಿಸಿದರು
ಕೊಪ್ಪಳದಲ್ಲಿ ಶನಿವಾರ ಬ್ರಾಹ್ಮಣ ಸಮಾಜದ ಪ್ರಮುಖರ ಜೊತೆ ಸಿಪಿಐ ಸಂತೋಷ ಹಳ್ಳೂರ ಚರ್ಚಿಸಿದರು   

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾನುವಾರ ಮತ್ತು ಸೋಮವಾರ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮಹಾಸಭಾ ಭಾನುವಾರ ಬೆಳಿಗ್ಗೆ 9 ಗಂಟೆಗೆ ರಾಯರ ಮಠದಿಂದ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದ ತನಕ ರ್‍ಯಾಲಿ ನಡೆಸಲು ತಯಾರಿ ಮಾಡಿಕೊಂಡಿದೆ. ಶನಿವಾರ ಬೆಳಿಗ್ಗೆ ಕೊಪ್ಪಳ ನಗರ ಠಾಣೆಯ ಸಿಪಿಐ ಸಂತೋಷ ಹಳ್ಳೂರ ಅವರು ಸಮಾಜದ ಪ್ರಮುಖರ ಜೊತೆ ಚರ್ಚಿಸಿ ಬೈಕ್‌ ರ್‍ಯಾಲಿಗೆ ಅವಕಾಶವಿಲ್ಲ ಎಂದು ಹೇಳಿದರು.

ADVERTISEMENT

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಬ್ರಾಹ್ಮಣ ಸಮಾಜದ ಪ್ರಮುಖ ವಸಂತ ಪೂಜಾರ, ‘ಈ ಸಂಬಂಧ ಸಭೆ ನಡೆಸಿದ್ದು, ಪೊಲೀಸರ ಅನುಮತಿ ಸಿಗದ ಕಾರಣ ಬೈಕ್‌ ರ್‍ಯಾಲಿ ರದ್ದುಪಡಿಸಲಾಗಿದೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ‘ಯಾವುದೇ ರ್‍ಯಾಲಿಗೆ ಅನುಮತಿಯಿಲ್ಲ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. 75 ಜನ ಹೋಂ ಗಾರ್ಡ್ ಮತ್ತು ಎರಡು ಕೆಎಸ್‌ಆರ್‌ಪಿ ವಾಹನಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

ರಕ್ತದಾನ ಶಿಬಿರ ನಾಳೆ:

ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಇಲ್ಲಿನ ಭಾಗ್ಯನಗರದ ರಾಮಮಂದಿರ ದೇವಸ್ಥಾನದಲ್ಲಿ ಜ.22 ರಂದು ರಕ್ತದಾನ ಶಿಬಿರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾಲ್‌ ಖಾಟಿಕ ಸಮಾಜದ ಖಜಾಂಚಿ ಪರಶುರಾಮ್‌ ಕಲಾಲ್‌ ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಭಜರಂಗಿ ಬಂಟರ ಬಳಗ ಮತ್ತು ಕಲಾಲ್‌ ಖಾಟಿಕ ಸಮಾಜದ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಸ್ವಯಂ ಪ್ರೇರಿತರಾಗಿ ಎರಡೂ ಸಂಘದವರು ಸೇರಿ 30 ಜನ ರಕ್ತದಾನ ಮಾಡುತ್ತೇವೆ’ ಎಂದು ತಿಳಿಸಿದರು. ಸಾರ್ವಜನಿಕರು ಕೂಡ ರಕ್ತದಾನ ಮಾಡುವಂತೆ ಅವರು ಮನವಿ ಮಾಡಿದರು. 22ರಂದು ರಾಮಮೂರ್ತಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಸಂಜೆ ದೀಪೋತ್ಸವ  ಭಜರಂಗಿ ಬಂಟರ್ ಬಳಗದ ಸಹಯೋಗದಲ್ಲಿ ಸುಮಾರು ಐದು ಸಾವಿರ ಜನರಿಗೆ ಮಕ್ಕಳ ರಾಮಾಯಣ ಪುಸ್ತಕ ವಿತರಣೆ ಮಾಡಲಾಗುವುದು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ರಕ್ತದಾನ ಮಾಡುವವರು 9035077107 ಸಂಪರ್ಕಿಸುವಂತೆ ಕೋರಿದರು.

ಸಂಘಟಕರಾದ ಡಾ. ಶಿವಕುಮಾರ ಕಂಬಳಿ ನವೀನ್ ಕುಮಾರ ಶಿರಿಗೇರಿ ವಿ. ಮಂಜುನಾಥ ಕಲಾಲ್ ಹಾಗೂ ಗೋವಿಂದರಾಜ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.