ಬಸವರಾಜ ದಢೇಸೂಗೂರು
ಕೊಪ್ಪಳ: ’ಸಕಾಲಕ್ಕೆ ಯೂರಿಯಾ ರಸಗೊಬ್ಬರ ನೀಡದೇ ರಾಜ್ಯ ಸರ್ಕಾರ ಅನ್ನ ನೀಡುವ ರೈತನ ಬಾಯಿಗೆ ಮಣ್ಣು ಮುಕ್ಕಿಸಿದೆ. ಇದನ್ನು ಖಂಡಿಸಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ರಾಜ್ಯಕ್ಕೆ ನೀಡಿದರೂ ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ಹಿಂಬಾಲಕರ ಅಂಗಡಿಗಳಿಗೆ ಮಾತ್ರ ಗೊಬ್ಬರ ನೀಡಲಾಗಿದೆ. ಸರ್ಕಾರಕ್ಕೆ ಒಂದು ಬೆಳೆಗೂ ಸರಿಯಾಗಿ ರಸಗೊಬ್ಬರ ಕೊಡಲು ಸಾಧ್ಯವಾಗುತ್ತಿಲ್ಲ. ಇದು ಸರ್ಕಾರದ ಸಾಧನೆಗೆ ಸಾಕ್ಷಿಯಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೈತರು ಸಂಕಷ್ಟದಲ್ಲಿದ್ದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ನಿದ್ದೆ ಮಾಡುತ್ತಿದ್ದಾರೆ. ಈಗಿನ ಸರ್ಕಾರದಿಂದಲೇ ರೈತರಿಗೆ ಬಡತನ ಬಂದಿದೆ. ಮುಂದಿನ ತಿಂಗಳು ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಕೊಪ್ಪಳಕ್ಕೆ ಬರುತ್ತಿದ್ದು, ಸರ್ಕಾರದ ಸಾಧನೆ ಏನಿದೆ ಎನ್ನುವುದನ್ನು ಅವರು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
‘ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಬಿಜೆಪಿ ರೈತ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮುಂದಾಳತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿ ಹೋರಾಟದ ಯೋಜನೆ ರೂಪಿಸಲಾಗುತ್ತದೆ’ ಎಂದು ತಿಳಿಸಿದರು.
ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಮುಖಂಡ ಮಲ್ಲಿಕಾರ್ಜುನ ಹಾಗೂ ಮಾಧ್ಯಮ ಪ್ರಮುಖ ಪ್ರಸಾದ್ ಗಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.