ADVERTISEMENT

ಮನೆ ನಿರ್ಮಾಣಕ್ಕೆ ಅಡ್ಡಿ: ಅಹೋರಾತ್ರಿ ಧರಣಿ ಆರಂಭ

ಬಿಜೆಪಿ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ದಸಂಸ ಮುಖಂಡರ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:21 IST
Last Updated 12 ಜುಲೈ 2025, 6:21 IST
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ವೀರೇಶ ನಾಗವಂಶಿ ಅವರ ಮನೆ ನಿರ್ಮಾಣಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ದೂರಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ವೀರೇಶ ನಾಗವಂಶಿ ಅವರ ಮನೆ ನಿರ್ಮಾಣಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ದೂರಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿ ತಮ್ಮ ಮನೆ ಕಟ್ಟಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ತಾಲ್ಲೂಕುಮಟ್ಟದ ಅಧಿಕಾರಿಗಳ ಮೂಲಕ ಮನೆ ನಿರ್ಮಾಣದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲ ಇದೆ ಎಂದು ದೂರಿ ವೀರೇಶ ನಾಗವಂಶಿ ಕುಟುಂಬ ಆರಂಭಿಸಿರುವ ಪ್ರತಿಭಟನೆಗೆ ಬಿಜೆಪಿ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಹಾಗೂ ಕೆಲ ದಲಿತ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಗ್ರಾಮದ ಮಾಕಣ್ಣ ಕಂಬ್ಳಿ ವೃತ್ತದಲ್ಲಿ ಆರಂಭಿಸಿರುವ 48 ಗಂಟೆಗಳ ನಿರಂತರ ಪ್ರತಿಭಟನೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

‘ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿ ಪ್ರತಿ ಮನೆಯನ್ನೂ ಅಕ್ರಮವಾಗಿಯೇ ನಿರ್ಮಾಣ ಮಾಡಲಾಗಿದೆ. ಜನರು ಅಲ್ಲಿಯೇ ವಾಸಿಸುತ್ತಿದ್ದಾರೆ. ನಾಗವಂಶಿ ಅವರು ಮನೆ ಕಟ್ಟಲು ಆರಂಭಿಸಿದ್ದು, ಅಧಿಕಾರಿಗಳ ಮೂಲಕ ಸಚಿವ ತಂಗಡಗಿ ಹಾಗೂ ಸ್ಥಳೀಯ ಕೆಲವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಾಗವಂಶಿ ಬಿಜೆಪಿ ಕಾರ್ಯಕರ್ತರಾಗಿದ್ದು, ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ಮನೆ ನಿರ್ಮಾಣ ಮಾಡದಂತೆ ತಾಕೀತು ಮಾಡಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ‘ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಈ ಜಾಗದಲ್ಲಿ ಮಾಂಸ, ಮದ್ಯದ ಅಂಗಡಿ ಹಾಗೂ ಗೂಡಂಗಡಿಗಳನ್ನಿಟ್ಟು ಬಾಡಿಗೆ ಪಡೆಯುತ್ತಿರುವವರನ್ನು ಬಿಟ್ಟು ದಲಿತ ಕೇರಿಯಲ್ಲಿ ಮನೆ ನಿರ್ಮಾಣ ಮಾಡುವವರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಸಚಿವ ಶಿವರಾಜ ತಂಗಡಗಿ, ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಹಾಗೂ ಪಿಐ ಅವರ ವಿರುದ್ಧ ಧಿಕ್ಕಾರ ಕೂಗಿದರು.

ವೀರೇಶ ನಾಗವಂಶಿ, ಪ್ರಗತಿಪರ ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಲಿಂಗರಾಜ ಹೂಗಾರ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ,‌ ಬಿಜೆಪಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ, ಮಂಜುನಾಥ ಮಸ್ಕಿ, ಉಪಾಧ್ಯಕ್ಷ ನಿಂಗಪ್ಪ ನವಲಿ, ಕೆಡಿಪಿ ಮಾಜಿ ಸದಸ್ಯ ಗುರುಮೂರ್ತಿ, ದಲಿತ ಸಂಘಟನೆಯ ಯಲ್ಲಪ್ಪ ಕಟ್ಟಿಮನಿ ಹಾಗೂ ಇತರರು ಮಾತನಾಡಿದರು.

ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಟ್ಟಣ ಪಂಚಾಯಿತಿ ಸದಸ್ಯ ಹನುಮಂತ ಬಸರಿಗಿಡದ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ ಕಂಬ್ಳಿ, ನಾಗೇಶ ಪರಂಗಿ, ಪ್ರಮುಖ ಭಾಗವಹಿಸಿದ್ದರು. ವಿವಿಧ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.