ADVERTISEMENT

ನಿಡಶೇಸಿ ಕೆರೆ ಬಳಿ ಸಸ್ಯೋದ್ಯಾನ

ಸಾಕಾರಗೊಳ್ಳುತ್ತಿದೆ ಗವಿಮಠ ಗವಿಶ್ರೀಗಳ ಆಶಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 4:40 IST
Last Updated 28 ಜೂನ್ 2021, 4:40 IST
ಕುಷ್ಟಗಿ ಬಳಿಯ ನಿಡಶೇಸಿ ಕೆರೆ ದಂಡೆಯಲ್ಲಿ ನಿರ್ಮಾಣ ಹಂತದ ಉದ್ಯಾನದಲ್ಲಿ ಲಾನ್‌ ಹುಲ್ಲುಹಾಸು ನಾಟಿ ಮಾಡುತ್ತಿರುವುದು
ಕುಷ್ಟಗಿ ಬಳಿಯ ನಿಡಶೇಸಿ ಕೆರೆ ದಂಡೆಯಲ್ಲಿ ನಿರ್ಮಾಣ ಹಂತದ ಉದ್ಯಾನದಲ್ಲಿ ಲಾನ್‌ ಹುಲ್ಲುಹಾಸು ನಾಟಿ ಮಾಡುತ್ತಿರುವುದು   

ಕುಷ್ಟಗಿ: ನಿಡಶೇಸಿ ಕೆರೆ ಹೂಳೆತ್ತುವುದರ ಜೊತೆಗೆ ಈ ಸ್ಥಳದಲ್ಲಿ ಸಾರ್ವಜನಿಕರಿಗೆ ವಿಹರಿಸಲು ಸುಂದರ ಉದ್ಯಾನ ನಿರ್ಮಾಣ ಮಾಡುವ ಕನಸಿನೊಂದಿಗೆಎರಡು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ್ದ ಮಾತು. ಅವರ ಆಶಯಕ್ಕೆ ತಕ್ಕಂತೆ ಈಗ ಬಹುಕೋಟಿ ವೆಚ್ಚದ ಹಸಿರಿನ ತೋಟ ನಿರ್ಮಾಣ ಹಂತದಲ್ಲಿದೆ.

ಪಟ್ಟಣದಿಂದ 3ಕಿಮೀ ದೂರದ ನಿಡಶೇಸಿ ಕೆರೆ ಹಿನ್ನಿರಿನ ದಂಡೆಯಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ ಸಸ್ಯೋದ್ಯಾನ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆದಿವೆ.

ದಿನೇ ದಿನೇ ಪಟ್ಟಣ ಬೆಳೆಯುತ್ತಿದೆ. ಸಾಕಷ್ಟು ಬಡಾವಣೆಗಳಲ್ಲಿ ಉದ್ಯಾನ ಜಾಗಗಳೂ ಇವೆ. ಆದರೆ ಉದ್ಯಾನ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ. ಅದೇ ರೀತಿ ಸಾರ್ವಜನಿಕರು, ಮಕ್ಕಳು, ಮಹಿಳೆಯರು ಹೀಗೆ ಎಲ್ಲರ ಮನ ಮುದಗೊಳಿಸುವ ರೀತಿಯಲ್ಲಿ ಪಟ್ಟಣದಲ್ಲಿ ಒಂದು ಸ್ಥಳವೂ ಇಲ್ಲ.

ADVERTISEMENT

ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ವಿಶೇಷ ಆಸಕ್ತಿ ಹೊಂದಿದ್ದು, ಉದ್ಯಾನ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದಾರೆ. ಉದ್ಯಾನ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ₹1.50 ಕೋಟಿ ಮತ್ತು 2020-21 ರಲ್ಲಿ ₹80 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಉದ್ಯಾನ ನಿರ್ಮಾಣಗೊಂಡರೆ ಬಹಳಷ್ಟು ಆಕರ್ಷಣೀಯವಾಗಲಿದೆ. ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಜನರಿಗೆ ಉತ್ತಮ ತಾಣದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಉದ್ಯಾನ ನಿರ್ಮಾಣದ ಹೊಣೆ ಹೊತ್ತಿರುವ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ಎಂಜಿನಿಯರ್ ಇರ್ಫಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.