ADVERTISEMENT

ಕೊಪ್ಪಳದಲ್ಲಿ ಸೇತುವೆ ಬೇಡಿಕೆ: ಸಚಿವ ಹಾಲಪ್ಪ ಆಚಾರ್‌ಗೆ ಗ್ರಾಮಸ್ಥರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 7:07 IST
Last Updated 2 ಅಕ್ಟೋಬರ್ 2022, 7:07 IST
 ಸಚಿವ ಹಾಲಪ್ಪ ಆಚಾರ್‌ಗೆ ಗ್ರಾಮಸ್ಥರಿಂದ ತರಾಟೆ
ಸಚಿವ ಹಾಲಪ್ಪ ಆಚಾರ್‌ಗೆ ಗ್ರಾಮಸ್ಥರಿಂದ ತರಾಟೆ   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ಯಲಬುರ್ಗಾ ತಾಲ್ಲೂಕಿನ ಸಂಕನೂರು ಬಳಿಯ ಹಳ್ಳದಲ್ಲಿ ಶನಿವಾರ ರಾತ್ರಿ ನಾಲ್ಕು ಜನ ಮಹಿಳೆಯರು ಕೊಚ್ಚಿ ಹೋಗಿದ್ದ ಘಟನಾ ಸ್ಥಳಕ್ಕೆ ಭಾನುವಾರ ಬೆಳಿಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಭೇಟಿ ನೀಡಿದಾಗ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.

ಹಾಲಪ‍್ಪ ಆಚಾರ್‌ ಸ್ವಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ಹಳ್ಳಕ್ಕೆ ರಕ್ಷಣಾ ಗೋಡೆ ಅಥವಾ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸಚಿವರು ನಮ್ಮ ಬೇಡಿಕೆಗೆ ಮನ್ನಣೆ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮೃತ ವ್ಯಕ್ತಿಗಳ ಕುಟುಂಬದ ಸದಸ್ಯ ಸಿದ್ದು ಮಾತನಾಡಿ ‘ಹಿಂದಿನ ಸಚಿವರು ಹಾಗೂ ಈಗಿನ ಸಚಿವ ಹಾಲಪ್ಪ ಆಚಾರ್‌ ಅವರನ್ನು ಹಲವು ಬಾರಿ ಸೇತುವೆ ನಿರ್ಮಿಸಿಕೊಂಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ಕು ಜನರ ಪೈಕಿ ಇಬ್ಬರು ಸುಮಾರು ಎರಡು ತಾಸು ಆಸರೆಯಾಗಿ ಅಂಗಲಾಚಿದ್ದಾರೆ. ಸೇತುವೆ ನಿರ್ಮಾಣ ಹಾಗೂ ಮೃತ ವ್ಯಕ್ತಿಗಳ ಕುಟುಂಬಕ್ಕೆ ನೆರವಿನ ಬಗ್ಗೆ ಈಗಲೇ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಳಿಕ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್‌ ‘ಒಂದು ತಿಂಗಳ ಹಿಂದೆ ಹಳ್ಳದಲ್ಲಿ ಪೊಲೀಸರು ಕೊಚ್ಚಿಕೊಂಡು ಹೋದ ತೊಂಡಿಹಾಳ ಮತ್ತು ಸಂಕನೂರು ಬಳಿ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಬಹಳ ದಿನಗಳಿಂದ ಇದೆ. ಹಿಂದೆ ಈ ಮಾರ್ಗದಲ್ಲಿ ರಸ್ತೆ ನಿರ್ಮಿಸುವಾಗ ಹಳ್ಳಗಳನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಸೇತುವೆ ನಿರ್ಮಿಸದೇ ಕಾಮಗಾರಿ ಮುಗಿಸಲಾಗಿದೆ. ಇಲ್ಲಿ ಸೇತುವೆ ನಿರ್ಮಿಸುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎರಡ್ಮೂರು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಪ್ರತ್ಯೇಕ ಎನ್‌ಡಿಆರ್‌ಎಫ್‌ ತಂಡವಿಲ್ಲ. ತಂಡ ಇಲ್ಲಿಯೇ ಇದ್ದಿದ್ದರೆ ಮಹಿಳೆಯರ ಜೀವ ಉಳಿಸಬಹುದಿತ್ತಲ್ಲವೇ ಎನ್ನುವ ಪ್ರಶ್ನೆಗೆ ’ಜಿಲ್ಲೆಗೆ ಪ್ರತ್ಯೇಕ ತಂಡ ಕೊಡಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಕೊಚ್ಚಿಕೊಂಡು ಹೋಗಿದ್ದ ನಾಲ್ಕು ಜನ ಮಹಿಳೆಯರ ಪೈಕಿ ಮೂವರು ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ. ಇನ್ನೊಬ್ಬರ ಶೋಧಕ್ಕೆ ಅಗ್ನಿಶಾಮಕ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸೇರಿದಂತೆ ಜಿಲ್ಲೆಯ ಪ್ರಮುಖರು ಘಟನಾ ಸ್ಥಳದಲ್ಲಿದ್ದಾರೆ.

ತಲಾ ₹5 ಲಕ್ಷ ಪರಿಹಾರ

ಸರ್ಕಾರದ ನಿಯಮಗಳ ಪ್ರಕಾರ ಮೃತ ವ್ಯಕ್ತಿಗಳ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು. ಜಿಲ್ಲಾಧಿಕಾರಿ ಈಗಾಗಲೇ ಎಲ್ಲಾ ದಾಖಲೆಗಳನ್ನು ತಯಾರಿಸಿದ್ದಾರೆ. ಕುಟುಂಬಸ್ಥರ ಬ್ಯಾಂಕ್‌ ದಾಖಲೆ ಸಂಗ್ರಹಿಸಿ ಒಂದೆರೆಡು ದಿನಗಳಲ್ಲಿ ಪರಿಹಾರ ಹಣ ಸಂತ್ರಸ್ತ ಕುಟುಂಬಗಳಿಗೆ ತಲುಪಲಿದೆ ಎಂದು ಹಾಲಪ್ಪ ಆಚಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.