ADVERTISEMENT

ವೃದ್ಧರು, ಚಿಕ್ಕಮಕ್ಕಳ ಪ್ರಯಾಣ ಬೇಡ: ಜಿಲ್ಲಾಧಿಕಾರಿ

ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ

​ಪ್ರಜಾವಾಣಿ ವಾರ್ತೆ
Published 20 ಮೇ 2020, 14:08 IST
Last Updated 20 ಮೇ 2020, 14:08 IST
ಕೊಪ್ಪಳದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಮಾಡುವ ಮೂಲಕ ನಿರ್ವಾಹಕರು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು
ಕೊಪ್ಪಳದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಮಾಡುವ ಮೂಲಕ ನಿರ್ವಾಹಕರು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು   

ಕೊಪ್ಪಳ: ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ಅಂತರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮೇ 17 ರಂದು ಕೋವಿಡ್-19ಕ್ಕೆ ಸಂಬಂಧಿಸಿದಂತೆ ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರದ ಆದೇಶ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಮೇ 19 ರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ಅಂತರ ಜಿಲ್ಲಾ ವ್ಯಾಪ್ತಿಯಲ್ಲಿಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಸ್‍ ಹೋಡಾಟ ನಡೆಸಿವೆ.ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಸಂಚಾರ ಕಾರ್ಯಾಚರಣೆ ಮಾಡಲಾಗುತ್ತಿದೆ. 4ನೇ ಹಂತದ ಲಾಕ್‍ಡೌನ್ ಮುಗಿಯುವವರೆಗೂ ಪ್ರತಿ ಭಾನುವಾರ ಸಂಸ್ಥೆಯ ಸಾರಿಗೆ ಸಂಚಾರ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಈ.ಕ.ರ.ಸಾ. ಸಂಸ್ಥೆ, ಕೊಪ್ಪಳ ವಿಭಾಗದ ಕೊಪ್ಪಳ, ಕುಷ್ಟಗಿ, ಗಂಗಾವತಿ, ಕುಕನೂರು ಹಾಗೂ ಯಲಬುರ್ಗಾ ಘಟಕಗಳಿಂದ ಪಾಯಿಂಟ್ ಟು ಪಾಯಿಂಟ್ ಮತ್ತು ಅಂತರ ಜಿಲ್ಲೆ ಸ್ಥಳಗಳಿಗೆ ಬಸ್ ಸೇವೆ ಪ್ರಾರಂಭಿಸಲಾಗಿದ್ದು, ಪ್ರತಿ ಬಸ್‍ನಲ್ಲಿ ಗರಿಷ್ಠ 30 ಜನ ಪ್ರಯಾಣಿಕರು ನಿಗದಿತ ಅಂತರ ಕಾಯ್ದುಕೊಂಡು ಸಂಸ್ಥೆಯ ಪ್ರಸ್ತುತ ಚಾಲ್ತಿಯಲ್ಲಿರುವ ದರದಂತೆ ಹಣವನ್ನು ಪಾವತಿಸಿ, ಟಿಕೆಟ್ ಪಡೆದುಕೊಂಡು ಪ್ರಯಾಣಿಸಬಹುದಾಗಿದೆ.

ADVERTISEMENT

ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು ಹಾಗೂ ಮೇಲಿನ ಬಸ್ ನಿಲ್ದಾಣಗಳಲ್ಲಿ ಪ್ರತಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನ್ ಟೆಸ್ಟಿಂಗ್ ಮಾಡಲಾಗುವುದು. ಟೆಸ್ಟಿಂಗ್ ಸಮಯದಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತಹ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುವುದು. ಬಸ್ ನಿಲ್ದಾಣದಿಂದ ಹೊರಡುವ ಪ್ರತಿ ಬಸ್ಸಿನಲ್ಲಿ 25 ರಿಂದ 30 ಜನ ಪ್ರಯಾಣಿಕರು ಬಂದ ನಂತರ ಬಸ್ ಪ್ರಾರಂಭಿಸಲಾಗುವುದು. ಹಾಗೂ ಪ್ರಮುಖ ಬಸ್ ನಿಲುಗಡೆಗಳಿಗೂ ಸಹ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿ 30 ಜನ ಪ್ರಯಾಣಿಕರಿಗಿಂತಲೂ ಹೆಚ್ಚಿಗೆ ಪ್ರಯಾಣಿಸದಂತೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕ ಮಕ್ಕಳು ಅಥವಾ ವಯೋವೃದ್ದರು ಕೋವಿಡ್-19 ರೋಗ ಲಕ್ಷಣಗಳು ಕಡಿಮೆಯಾಗುವವರೆಗೂ ಬಸ್‍ಗಳಲ್ಲಿ ಸಂಚಾರ ಮಾಡಬಾರದು. ಹಂತಹಂತವಾಗಿ ಪ್ರಯಾಣಿಕರ ಬೇಡಿಕೆಯಂತೆ 25 ರಿಂದ 30 ಜನ ಪ್ರಯಾಣಿಕರಿದ್ದಲ್ಲಿ ಜಿಲ್ಲಾ ಹಾಗೂ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‍ಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.