ADVERTISEMENT

ಸಾರಿಗೆ ನೌಕರರ ಮುಷ್ಕರ: ಪರದಾಟ

ಚಾಲಕರ ಮೇಲೆ ಹಲ್ಲೆ ನಡೆಸದಂತೆ ಪೊಲೀಸ್‌ ಬಂದೋಬಸ್ತ್‌: ಸಿಕ್ಕ–ಸಿಕ್ಕ ವಾಹನ ಹತ್ತಿಕೊಂಡು ತೆರಳಿದ ಜನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:16 IST
Last Updated 13 ಏಪ್ರಿಲ್ 2021, 6:16 IST
ಹನುಮಸಾಗರ ಹಳೆ ಬಸ್‍ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಹತ್ತುತ್ತಿರುವ ಪ್ರಯಾಣಿಕರು
ಹನುಮಸಾಗರ ಹಳೆ ಬಸ್‍ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಹತ್ತುತ್ತಿರುವ ಪ್ರಯಾಣಿಕರು   

ಕೊಪ್ಪಳ: 6ನೇ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರು ಪರದಾಡುವಂತೆ ಆಗಿದೆ. ಅಲ್ಲದೆ ನಿತ್ಯ ಜಿಲ್ಲೆಯಿಂದ ₹40 ಲಕ್ಷ ಆದಾಯ ತರುತ್ತಿದ್ದ ಸಂಸ್ಥೆಗೆ ನಷ್ಟ
ಉಂಟಾಗುತ್ತಿದೆ.

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದ್ದು, ಸಿಬ್ಬಂದಿ ಇನ್ನೂ ಗೊಂದಲದಲ್ಲಿಯೇ ಇದ್ದು ಕರ್ತವ್ಯಕ್ಕೆ ಹಾಜರಾಗಲು ಮೀನಮೇಷ ಎನಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು, ಚಾಲಕರು, ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದು, 88 ಜನ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ. 237 ಬಸ್‌ಗಳು 409 ರೂಟ್‌ಗಳಲ್ಲಿ ನಿತ್ಯ ಸಂಚರಿಸುತ್ತಿದ್ದವು.

ಈಗ 44 ಬಸ್‌ಗಳು ಮಾತ್ರ ಸಂಚಾರ ಆರಂಭಿಸಿದ್ದು, ಕೆಲವು ಭಾಗದ ಜನತೆಗೆ ಅನುಕೂಲವಾಗಿದೆ.

ADVERTISEMENT

ಅಗತ್ಯ ಮತ್ತು ತುರ್ತು ಕೆಲಸಗಳಿಗೆ ಮಾತ್ರ ಪ್ರಯಾಣ ಕೈಗೊಳ್ಳುತ್ತಿದ್ದು, ಬಹುತೇಕರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಕೆಲವು ಸಿಬ್ಬಂದಿ ಹಿರಿಯ ಅಧಿಕಾರಿಗಳು ತೆರಳಿ ಮನವೊಲಿಕೆ ಮಾಡುತ್ತಿದ್ದು, ಸೇವೆಗೆ ಹಾಜರಾಗದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗುತ್ತಿದೆ.ವರ್ಗಾವಣೆ, ಅಮಾನತು ಸೇರಿದಂತೆ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ನಡೆಯದ ಪ್ರತಿಭಟನೆ: ತಟ್ಟೆ, ಲೋಟ, ಚಮಚೆಗಳೊಂದಿಗೆ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೇಂದ್ರ ಮತ್ತು ತಾಲ್ಲೂಕು ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿತ್ತು. ಇದರಿಂದ ಯಾವುದೇ ಪ್ರತಿಭಟನೆ ನಡೆಯಲಿಲ್ಲ.

200 ಮೀಟರ್ ಸುತ್ತಮುತ್ತ ಜನತೆ ಬೆಳಿಗ್ಗೆ 8ರಿಂದ 5ರವರೆಗೆ ಗುಂಪುಗೂಡುವುದು, ಬಸ್‌ಗಳಿಗೆ ಹಾನಿ, ಚಾಲಕರ ಮೇಲೆ ಹಲ್ಲೆ ಮಾಡದಂತೆ ಬಿಗಿಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು. ಯುಗಾದಿ ಹಬ್ಬದಂದು ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರು ಸಿಕ್ಕ, ಸಿಕ್ಕ ವಾಹನ ಹತ್ತಿಕೊಂಡು ಹೊರಟಿದ್ದು ಕಂಡು ಬಂತು. ಯುಗಾದಿ ನಿಮಿತ್ತ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿತ್ತು.

ಬಸ್‌ಗಳ ಬಂದ್‌ನಿಂದ ಸಂಸ್ಥೆಗೆ ಇಲ್ಲಿಯವರೆಗೆ 2.50 ಕೋಟಿ ಹಾನಿಯಾಗಿದೆ ಜಿಲ್ಲಾ ಸಾರಿಗೆ ನಿಯಂತ್ರಣ ಅಧಿಕಾರಿ ಎಂ.ಎ.ಮುಲ್ಲಾ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಪ್ರಯಾಣಿಕರ ಪರದಾಟ

ಹನುಮಸಾಗರ: ‘ಯುಗಾದಿ ಪ್ರಯುಕ್ತ ಊರಿಗೆ ಹೋಗಬೇಕು. ಬಸ್ ಸೌಲಭ್ಯವಿಲ್ಲ. ಖಾಸಗಿ ವಾಹನಗಳು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ತಲುಪಬೇಕಾದ ಸ್ಥಳಕ್ಕೆ ತಲುಪಿಸುವುದಿಲ್ಲ.

ಇನ್ನು ಎಷ್ಟು ದಿನ ಈ ಸಮಸ್ಯೆ’ ಎಂದು ಇಲ್ಲಿನ ಪ್ರಯಾಣಿಕರು ಅಳಲು ತೋಡಿಕೊಂಡರು. ಪ್ರಯಾಣಿಕರು ಇಲ್ಲಿನ ಹಳೆ ಬಸ್‌ ನಿಲ್ದಾಣದಲ್ಲಿ ಚೀಲ ಹಿಡಿದು ಖಾಸಗಿ ವಾಹನ ಹತ್ತುತ್ತಿರುವುದು ಕಂಡುಬಂತು. ಸಾರಿಗೆ ನೌಕರರ ಮುಷ್ಕರದಿಂದ ಗ್ರಾಮಿಣ ಪ್ರದೇಶದ ಪ್ರಯಾಣಿಕರಿಗೆ ತೀರಾ ತೊಂದರೆಯಾಗುತ್ತಿದೆ.

‘ಖಾಸಗಿ ವಾಹನಗಳು ಕೇವಲ ನಗರಗಳ ಕಡೆ ಮುಖ ಮಾಡಿ ನಿಂತರೆ, ಗ್ರಾಮಾಂತರ ಪ್ರದೇಶಗಳಿಗೆ ನಾವು ಹೋಗುವುದಾದರು ಹೇಗೆ? ಬಾಡಿಗೆ ವಾಹನ ಮಾಡಿಕೊಂಡು ಹೋಗಲು ಸಾಧ್ಯವೇ? ಎಂದು ಕಬ್ಬರಗಿ ಗ್ರಾಮಕ್ಕೆ ಹೊರಟಿದ್ದ ಮಲ್ಲಪ್ಪ ಪಾಟೀಲ ನೋವು ತೋಡಿಕೊಂಡರು.

ಮುಷ್ಕರ ಆರಂಭವಾದಗಿನಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ವ್ಯಾಪಾರ–ವಹಿವಾಟು ಕೂಡ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಜನರಿಲ್ಲದೆ ಅಂಗಡಿಗಳು ಭಣಗುಡುತ್ತಿರುವುದು ಸೋಮವಾರ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.