ADVERTISEMENT

ಯಲಬುರ್ಗಾ | ಸಮಾವೇಶಕ್ಕೆ ಬಸ್‍ಗಳ ಬಳಕೆ; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:19 IST
Last Updated 20 ಮೇ 2025, 15:19 IST
ಯಲಬುರ್ಗಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‍ಗಾಗಿ ಕಾಯ್ದರು
ಯಲಬುರ್ಗಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‍ಗಾಗಿ ಕಾಯ್ದರು   

ಯಲಬುರ್ಗಾ: ನೆರೆಯ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಧನಾ ಸಮಾವೇಶ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ಹೋಗಲು ಸಾರಿಗೆ ಸಂಸ್ಥೆಯ ಬಸ್‍ಗಳನ್ನು ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಸೂಕ್ತ ಸಾರಿಗೆ ಸೇವೆ ಲಭ್ಯವಾಗದೇ ಪರದಾಡಬೇಕಾಯಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ಸಕಾಲದಲ್ಲಿ ಸೇವೆಗೆ ಹಾಜರಾಗಲು ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ತೊಂದರೆಯಾಯಿತು.

ಮೇ 19ರ ಸಂಜೆಯಿಂದ 21ರ ಬೆಳಿಗ್ಗೆವರೆಗೆ ದೈನಂದಿನ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ವ್ಯವಸ್ಥಾಪಕರು ನೋಟಿಸ್ ಜಾರಿಮಾಡಿ ಸಾರ್ವಜನಿಕರ ಗಮನಕ್ಕೆ ತಂದಿದ್ದರು. ಆದರೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಂಗತಿ ತಿಳಿಯದೇ ಇದ್ದುದರಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದು ಬಸ್‍ಗಳಿಗೆ ಕಾಯ್ದರು.

ADVERTISEMENT

ಪ್ರತಿ ಗ್ರಾ.ಪಂಗೆ ಎರಡು ಬಸ್‍ಗಳಂತೆ ತಾಲ್ಲೂಕಿನ ಎಲ್ಲ ಗ್ರಾ.ಪಂಗಳಿಂದ ಹೋಸಪೇಟೆಯ ಸಮಾವೇಶಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬೆಂಬಲಿಗರು ಸೇರಿ ಸುಮಾರು 4 ಸಾವಿರ ಸಂಖ್ಯೆಯ ಜನರನ್ನು ಕರೆದುಕೊಂಡು ಹೋಗಿವೆ. ಕುಕನೂರು ಮತ್ತು ಯಲಬುರ್ಗಾ ಘಟಕವನ್ನು ಒಳಗೊಂಡು ಒಟ್ಟು 71 ಬಸ್‍ಗಳು ಸಮಾವೇಶದ ಸೇವೆಯಲ್ಲಿ ನಿತರವಾಗಿದ್ದರಿಂದ ಜನಸಾಮಾನ್ಯರ ಸಾರಿಗೆ ಸೇವೆಗೆ ಅಲಭ್ಯವಾಗಿವೆ. ಈ ಕಾರಣದಿಂದ ಸಕಾಲದಲ್ಲಿ ಸಾರಿಗೆ ಸೇವೆ ದೊರೆಯದೇ ಪ್ರಯಾಣಿಕರು ಪರದಾಡಬೇಕಾಯಿತು.

ವಿವಿಧ ಗ್ರಾಮಗಳಿಂದ ಯಲಬುರ್ಗಾ ನಗರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಮಧ್ಯಾಹ್ನ 1.30ರ ಹೊತ್ತಿಗೆ ಮರಳಿ ತಮ್ಮ ಊರಿಗೆ ಸೇರುತ್ತಿದ್ದರು. ಆದರೆ ಬಸ್‍ಗಳ ಕೊರತೆಯಿಂದಾಗಿ ಸಂಜೆ 5.30ರ ಹೊತ್ತಿಗೆ ಊರು ಸೇರಬೇಕಾಯಿತು. ಅಲ್ಲದೇ ಒಂದೊಂದು ಬಸ್‍ನಲ್ಲಿ ಎರಡು ಬಸ್‍ಗಳಲ್ಲಿ ಕೂಡುವ ಪ್ರಯಾಣಿಕರು ಒಂದೇ ಬಸ್‍ನಲ್ಲಿ ಪ್ರಯಾಣಿಸಬೇಕಾಯಿತು. ಇದು ಅನಿವಾರ್ಯವಾಗಿದೆ ಎಂದು ಹಿರೇವಡ್ರಕಲ್ಲ ಗ್ರಾಮದ ಮರಿಯಪ್ಪ ಹಿರೇಮನಿ ಹೇಳಿದರು.

ಕಾಂಗ್ರೆಸ್ ಸಮಾವೇಶ: ಸಾಧನಾ ಸಮಾವೇಶ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ಸಮಾವೇಶ ಮಾಡಿಕೊಂಡಿದೆ. ಬಸ್‍ಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸಾರಿಗೆ ಸೇವೆ ಕಲ್ಪಿಸಿಕೊಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಫಲಾನುಭವಿಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಕರೆದುಕೊಂಡು ಹೋಗಿ ಸರ್ಕಾರವು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಮೂಲಕ ಅನಗತ್ಯವಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹೊರೆ ಆಗುವಂತೆ ಮಾಡಿದೆ ಎಂದು ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.