ADVERTISEMENT

ಕೊಳವೆಬಾವಿ ಹೆಸರಲ್ಲಿ ಲೂಟಿ ಆರೋಪ: ಕುಷ್ಟಗಿಯಲ್ಲಿ ಬಿಎಸ್‌ಪಿ ಪ್ರತಿಭಟನೆ

: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 4:24 IST
Last Updated 21 ಜುಲೈ 2021, 4:24 IST
ಕುಷ್ಟಗಿಯಲ್ಲಿ ಬಿಎಸ್‌ಪಿ ಕಾರ್ಯಕರ್ತರು ಕೊಳವೆಬಾವಿ ಹಗರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಕುಷ್ಟಗಿಯಲ್ಲಿ ಬಿಎಸ್‌ಪಿ ಕಾರ್ಯಕರ್ತರು ಕೊಳವೆಬಾವಿ ಹಗರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು   

ಕುಷ್ಟಗಿ: ತಾಲ್ಲೂಕಿನ 52 ವಿಮುಕ್ತ ದೇವದಾಸಿಯರು ಮತ್ತು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಕೊಳವೆಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಹೆಸರಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಡಾ.ಅಂಬೇಡ್ಕರ್‌ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮುಖಂಡ ಶಿವಪುತ್ರಪ್ಪ ಗುಮಗೇರಿ, ಗುರುಪಾದಪ್ಪ ಬೇವಿನಕಟ್ಟಿ ಇತರೆ ಪ್ರಮುಖರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.

ಕೊಳವೆಬಾವಿ ಕೊರೆದಿರುವುದಾಗಿ ಬೋಗಸ್‌ ಬಿಲ್‌ಗಳನ್ನು ಸಲ್ಲಿಸಿ ಸರ್ಕಾರವನ್ನು ವಂಚಿಸಿರುವ ಇಲ್ಲಿಯ ಲಕ್ಷ್ಮಿ ಬೋರ್‌ವೆಲ್‌ ಏಜೆನ್ಸಿ ಮತ್ತು ಅಕ್ಷಯ ಬೋರ್‌ವೆಲ್‌ ಏಜೆನ್ಸಿಗಳ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಬರೆದ ದೂರನ್ನು ತಹಶೀಲ್ದಾರ್ ಎಂ.ಸಿದ್ದೇಶ್‌ ಅವರ ಮೂಲಕ ಸಲ್ಲಿಸಿದರು.

ADVERTISEMENT

ಆಗಿದ್ದೇನು?: 2015-16 ರಿಂದ 2019-20 ರಲ್ಲಿ ವಿಮುಕ್ತ ದೇವದಾಸಿಯರು ಮತ್ತು ಪರಿಶಿಷ್ಟ ಜಾತಿಯ ಆರ್ಥಿಕ ದುರ್ಬಲರ ಬದುಕಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಳವೆಬಾವಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಸಾಂಸ್ಥಿಕ ಕೋಟಾ ಅಡಿಯಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಮಾಹಿತಿ ಹಕ್ಕು ಕಾಯ್ದೆ ಅಡಿ ಒದಗಿಸಿರುವ ಅಧಿಕೃತ ದಾಖಲೆಗಳ ಪ್ರಕಾರ 7 ಫಲಾನುಭವಿಗಳ ಹೆಸರಿನ ಮುಂದೆ ನಮೂದಿಸಿರುವ ಸರ್ವೇ ನಂಬರ್‌ಗಳ ಪಹಣಿಗಳೇ ಚಾಲ್ತಿಯಲ್ಲಿ ಇಲ್ಲ. 24 ಫಲಾನುಭವಿಗಳ ಹೆಸರಿನಲ್ಲಿ ತೋರಿಸಿರುವ ಸರ್ವೇ ನಂಬರ್‌ಗಳ ಪಹಣಿಗಳು ಇದ್ದರೂ ಅವುಗಳಲ್ಲಿ ಫಲಾನುಭವಿಗಳ ಹೆಸರೇ ಇಲ್ಲ. ಆದರೂ ಕೊಳವೆಬಾವಿಗಳನ್ನು ತೋಡಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ನೀಡಲಾಗಿದೆ ಎಂದು ಬಿಲ್‌ಗಳನ್ನು ಸೃಷ್ಟಿಸಿ ವಿಮುಕ್ತ ದೇವದಾಸಿಯರು, ಪರಿಶಿಷ್ಟ ಜಾತಿ ಜನರ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಕೋಟಿಗಟ್ಟಲೇ ಹಣ ಲೂಟಿ ಮಾಡಲಾಗಿದೆ ಎಂಬುದು ಬಿಎಸ್‌ಪಿ ಮುಖಂಡರ ಆರೋಪ.

ಎರಡು ಬಿಲ್‌: ಅಷ್ಟೇ ಅಲ್ಲ ಸರ್ಕಾರ ಸಾಂಸ್ಥಿಕ ಕೋಟಾದಲ್ಲಿನ ಬಹಳಷ್ಟು ಫಲಾನುಭವಿಗಳ ಹೆಸರುಗಳು ಶಾಸಕರ ವಿವೇಚನಾ ಕೋಟಾದಲ್ಲಿಯೂ ಇದ್ದು ಅಕ್ಷಯ ಮತ್ತು ಲಕ್ಷ್ಮಿ ಎಂಬ ಎರಡೂ ಬೋರ್‌ವೆಲ್‌ ಏಜೆನ್ಸಿಗಳು ಕೊರೆದಿರುವ ಕೊಳವೆಬಾವಿಗಳ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಎಂದು ಮುಖಂಡರು ಆರೋಪಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಸಿದ್ದೇಶ್‌, ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಗ್ಗೇಶ್‌, ಹುಲುಗೇಶ ದೇವರಮನಿ, ದುರುಗಪ್ಪ ತಾಳಕೇರಿ, ಶಂಕರ ಸಿದ್ದಾಪುರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.