
ಗಂಗಾವತಿ: ‘ಜನವರಿ 1ರಂದು ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಇಲ್ಲಿನ ಚನ್ನಬಸವಸ್ವಾಮಿ ತಾತನ ಪುರಾಣ ಮಂಟಪದಲ್ಲಿ ಚನ್ನಬಸವ ಶಿವಯೋಗಿಗಳ 80ನೇ ವರ್ಷದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘3 ದಿನಗಳ ಮುಂಚಿತವಾಗಿ ಪ್ರತಿ ದಿನ ದಶಮಿ ದಿಂಡಿನ ಉತ್ಸವ, ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ, ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ, ಉತ್ಸವ ಭಜನೆ, ಪುರಾಣ ಮಹಾಮಂಗಲ ಕಾರ್ಯಕ್ರಮ ನಡೆಯಲಿವೆ. ಜ.1ರಂದು ಬೆಳಿಗ್ಗೆ ಬ್ರಾಹ್ಮಿ ಮಹೂರ್ತದ್ಲಲಿ ಚನ್ನಬಸವ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ನಂತರ ಶ್ರೀಮಠದಿಂದ ಕೊಟ್ಟೂರೇಶ್ವರ ದೇವಸ್ಥಾನದ ಗಂಗೆ ಸ್ಥಳಕ್ಕೆ ಹೋಗಿ ಬರುವುದು, ತೇರಿನ ಪೂಜೆ, ತೇರಿಗೆ ಪಟ ಏರಿಸುವುದು, ಮಡಿರಥೋತ್ಸವ ನೆರವೇರಲಿವೆ’ ಎಂದರು.
‘ಸಂಜೆ ಚನ್ನಬಸವ ಶಿವಯೋಗಿಗಳ ಜೋಡು ಮಹಾರಥೋತ್ಸವ ನಡೆಯಲಿವೆ. 2ರಂದು ನಟರಾಜ ಕಲಾಮಂದಿರ ಅವರಿಂದ ಭರತ ನಾಟ್ಯ ಕಾರ್ಯಕ್ರಮ, ಅಖಿಲ ಭಾರತ ವೀರಶೈವ ಮಹಿಳಾ ಘಟಕ ಹಾಗೂ ಪ್ರತಿಭಾ ಕಲಾ ಕೇಂದ್ರ ಅವರಿಂದ ಸಾಂಸ್ಕೃ ತಿಕ ಕಾರ್ಯಕ್ರಮಗಳು ಇರಲಿವೆ’ ಎಂದು ಹೇಳಿದರು.
ಚೆನ್ನಬಸಯ್ಯ, ಅಯ್ಯನಗೌಡ, ಮಹಾಲಿಂಗಪ್ಪ ಬನ್ನಿಕೊಪ್ಪ, ರಾಚಪ್ಪ ಸಿದ್ದಾಪೂರ, ನಾಗರಾಜ ಬರಗೂರು, ವಿಜಯ ಮಹಾಂತೇಶ, ಲಿಂಗರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.