
ಕೊಪ್ಪಳ: ‘ಮಕ್ಕಳಿಗೆ ಅವರ ಬಾಲ್ಯದಲ್ಲಿ ಬಹುಮುಖಿ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡುವುದರಿಂದ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ನಗರದ ಹೊಸಪೇಟ ರಸ್ತೆಯ ಕಲ್ವಾರಿ ಚಾಪೆಲ್ ಟ್ರಸ್ಟ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮಕ್ಕಳ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮಕ್ಕಳು ತಮ್ಮ ಬಾಲ್ಯವನ್ನು ಭವಿಷ್ಯ ಗಮನದಲ್ಲಿಟ್ಟುಕೊಂಡು ಆಟೋಟಗಳ ಜೊತೆಗೆ ವಿದ್ಯಾಭ್ಯಾಸ, ಸಂಗೀತ, ಕಲೆ, ಮಾತುಗಾರಿಕೆಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಕೆ. ರಾಘವೇಂದ್ರ ಭಟ್, ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ. ಜಾಬಗೌಡರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮಕ್ಕಳ ದಿನದ ಪ್ರಯುಕ್ತ ನಮ್ಮ ಮಕ್ಕಳ ದಿನಾಚರಣೆ ಎನ್ನುವ ಅಂಶದೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಮಕ್ಕಳ ಕೈಯಲ್ಲಿ ನಿರೂಪಣೆ ಮಾಡಿಸಿ ಅವರಿಗೆ ವೇದಿಕೆ ಭಯವನ್ನು ಹೋಗಲಾಡಿಸಲು ಪ್ರಯತ್ನ ಮಾಡಲಾಗಿದೆ.ವರ್ಣಿತ್ ನೇಗಿ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.