ಕೊಪ್ಪಳ: ಯೇಸುಕ್ರಿಸ್ತನ ಜನ್ಮದಿನ ಅಂಗವಾಗಿ ಆಚರಿಸಲಾಗುವ ಕ್ರಿಸ್‌ಮಸ್ ಸಂಭ್ರಮ ಬುಧವಾರ ಜಿಲ್ಲೆಯಾದ್ಯಂತ ಕಂಡುಬಂದಿತು. ಚರ್ಚ್‌ಗಳಲ್ಲಿ ಕ್ರಿಶ್ಚಿಯನ್ನರು ಪ್ರಾರ್ಥನೆ ಸಲ್ಲಿಸಿ ಸಮುದಾಯದ ಮುಖಂಡರ ಸಂದೇಶ ಆಲಿಸಿದರು.
ಇಲ್ಲಿನ ನಗರಸಭೆ ಹಿಂಭಾಗದಲ್ಲಿರುವ ಕ್ರಿಸ್ತಜ್ಯೋತಿ ಇಸಿಐ ಚರ್ಚ್, ಬಿ.ಟಿ.ಪಾಟೀಲ ನಗರದಲ್ಲಿರುವ ಸೇಂಟ್ ಫ್ರಾನ್ಸಿಸ್ ಡೆಸೆಲ್ಸ್ (ಎಸ್‌ಎಫ್‌ಎಸ್) ಚರ್ಚ್ ಮತ್ತು ಗಣೇಶ ತೆಗ್ಗಿನಲ್ಲಿರುವ ಫುಲ್ ಗೊಸ್ಪೆಲ್ ಚರ್ಚ್ ಆಫ್ ಕ್ರೈಸ್ಟ್‌ನಲ್ಲಿ ಮಂಗಳವಾರ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಶದ ಜನರ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಇಸಿಐ ಚರ್ಚ್‌ನಲ್ಲಿ ಯೇಸುಕ್ರಿಸ್ರನ ಜನನ, ಬೆಳೆದು ಬಂದ ಹಾದಿ, ಧರ್ಮ ಗುರುವಾಗಿದ್ದು, ಎದುರಿಸಿದ ಸಂಕಷ್ಟಗಳು ಹೀಗೆ ಬದುಕಿನ ಗಾಥೆಯನ್ನು ವಿವರಿಸುವ ಮಾದರಿಯನ್ನು ತಯಾರಿಸಲಾಗಿತ್ತು. ಗೋದಲಿ ಕೂಡ ಪ್ರಮುಖ ಆಕರ್ಷಣೆಯಾಯಿತು.
ಶಾಸಕ ರಾಘವೇಂದ್ರ ಹಿಟ್ನಾಳ ಇಸಿಐ ಚರ್ಚ್‌ಗೆ ಭೇಟಿ ನೀಡಿ ಕ್ರಿಶ್ಚಿಯನ್ನರಿಗೆ ಹಬ್ಬದ ಶುಭಾಶಯ ಕೋರಿದರು. ಬಳಿಕ ಮಾತನಾಡಿ ‘ಕುರಿಕೊಟ್ಟಿಗೆಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಯೇಸುಕ್ರಿಸ್ತ ಅಸಾಮಾನ್ಯವಾಗಿ ಬೆಳೆದು ಮಾನವ ಕೋಟಿಗೆ ಬೆಳಕು ತೋರುವ ಕೆಲಸ ಮಾಡಿದ್ದಾರೆ. ತಮ್ಮ ಬದುಕು ಬೆಂಕಿಯಲ್ಲಿ ಬೆಂದರೂ ದೇವಮಾನವರಾಗಿ ಬೆಳೆದರು. ಯೇಸುವಿನ ತತ್ವ ಹಾಗೂ ಆದರ್ಶಗಳ ಬೋಧನೆಯು ಬೈಬಲ್ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲ, ಒಳಿತನ್ನು ಬಯಸುವ ಎಲ್ಲರಿಗೂ ಮಾದರಿಯ ಗ್ರಂಥವಾಗಿದೆ’ ಎಂದರು.
‘ಮಾನವ ಕುಲಕ್ಕೆ ಮನುಷ್ಯತ್ವದ ಪಾಠ ಹೇಳಿ ಕತ್ತಲಿನಿಂದ ಬೆಳಕಿನತ್ತ ಕರೆದುಕೊಂಡು ಹೋದ ಹೆಗ್ಗಳಿಕೆ ಯೇಸುಕ್ರಿಸ್ತನಿಗೆ ಸಲ್ಲಬೇಕು. ಮಾನವಕುಲ ಉದ್ದರಿಸಲು ಅವತರಿಸಿದ ಮಹಾಪುರುಷರು ಜಗತ್ತಿನಲ್ಲಿ ಅನೇಕರು ಇದ್ದಾರೆ. ಅವರಲ್ಲಿ ಯೇಸು ಕೂಡ ಪ್ರಮುಖರು. ನನ್ನ ಕ್ಷೇತ್ರ ವ್ಯಾಪ್ತಿಯ ಚರ್ಚ್‌ಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸುವೆ. ಮೂಲ ಸೌಕರ್ಯಗಳನ್ನು ಕಲ್ಪಿಸುವೆ’ ಎಂದು ಭರವಸೆ ನೀಡಿದರು.
ಫಾದರ್ ಜೆ.ರವಿಕುಮಾರ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ವಿನಯ್ ಅಗಡಿ, ಶ್ಯಾಮಸುಂದರ್ ಸೇರಿದಂತೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮನೆಗೆ ಕರೆದು ಔತಣ
ಕೊಪ್ಪಳದಲ್ಲಿ ಕ್ರಿಸ್‌ಮಸ್ ಅಂಗವಾಗಿ ಕ್ರಿಶ್ಚಿಯನ್ನರು ತಮ್ಮ ಸಂಬಂಧಿಕರು ಸ್ನೇಹಿತರು ಹಾಗೂ ನೆರೆಯವರನ್ನು ಮನೆಗೆ ಆಹ್ವಾನಿಸಿ ಹಬ್ಬದ ಖುಷಿ ಹಂಚಿಕೊಂಡು ಔತಣ ಉಣಬಡಿಸಿದರು. ಪ್ಲಮ್ ಕೇಕ್ ಪ್ರಮುಖ ಸಿಹಿ ತಿನಿಸು ತಯಾರಿಸಿದ್ದರು. ‘ಹಬ್ಬದ ಖುಷಿ ಆಚರಣೆಗೆ ಎಲ್ಲ ಸಮುದಾಯದ ಸ್ನೇಹಿತರನ್ನೂ ಆಹ್ವಾನಿಸಿದ್ದರಿಂದ ಸಸ್ಯಹಾರವನ್ನೇ ತಯಾರಿಸಲಾಗಿತ್ತು. ಜಿಲ್ಲಾ ಕಾರಾಗೃಹದಲ್ಲಿ ಹಬ್ಬದ ಹಿಂದಿನ ದಿನ ಕ್ರಿಸ್‌ಮಸ್ ಆಚರಿಸಲಾಗಿದೆ. ನಮಗೆ ಸಾಧ್ಯವಾದಷ್ಟು ಬಡವರಿಗೆ ದಾನ ಮಾಡುವುದು ಸಂತಾ ಕ್ಲಾಸ್ ವೇಷ ಧರಿಸುವ ಆಚರಣೆ ಮಾಡಲಾಯಿತು’ ಎಂದು ಕ್ರಿಶ್ಚಿಯನ್ ಸಮುದಾಯದ ಮುಖಂಡ ಪೀಟರ್ ಜೇಮ್ಸ್ ತಿಳಿಸಿದರು. ಹಬ್ಬದ ಅಂಗವಾಗಿ ಚರ್ಚ್‌ಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.