ADVERTISEMENT

ಅನಧಿಕೃತ ಅಂಗಡಿಗಳ ತೆರವು: ಕುಷ್ಟಗಿಯಲ್ಲಿ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:36 IST
Last Updated 18 ಜುಲೈ 2021, 12:36 IST
ಕುಷ್ಟಗಿಯಲ್ಲಿ ಶನಿವಾರ ಅಧಿಕಾರಿಗಳು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು
ಕುಷ್ಟಗಿಯಲ್ಲಿ ಶನಿವಾರ ಅಧಿಕಾರಿಗಳು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು   

ಪ್ರಜಾವಾಣಿ ವಾರ್ತೆ

ಕುಷ್ಟಗಿ: ಪಟ್ಟಣದ ಬಸ್‌ನಿಲ್ದಾಣದ ಸಮೀಪದ ಜೆಸ್ಕಾಂ ಕಚೇರಿ ಅಕ್ಕಪಕ್ಕದಲ್ಲಿದ್ದ ಅನಧಿಕೃತ ಅಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

ಅಂಗಡಿ ಮಾಲೀಕರ ಪರೋಕ್ಷ ಪ್ರತಿರೋಧದ ನಡುವೆಯೂ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಅಂಗಡಿಗಳ ಶೆಡ್‌ಗಳನ್ನು ಜಖಂಗೊಳಿಸಿ ಸಾಮಗ್ರಿಗಳನ್ನು ಪುರಸಭೆ ಟ್ರ್ಯಾಕ್ಟರ್‌ಗಳ ಮೂಲಕ ಸಾಗಿಸಿದರು.

ADVERTISEMENT

ಜೆಸ್ಕಾಂ ಕಚೇರಿ ಮುಂದೆ ಮತ್ತು ಪಕ್ಕದ ಚರಂಡಿಯ ಮೇಲೆ ಡಬ್ಬಾ ಅಂಗಡಿಗಳನ್ನು ಇರಿಸಿಲಾಗಿತ್ತು. ಅನಧಿಕೃತ ಅಂಗಡಿಗಳಿಂದ ಸುಮಗ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿತ್ತಲ್ಲದ ಪರಿಸರದಲ್ಲಿ ಮಾಲಿನ್ಯಕ್ಕೆ ಕಾರಣವಾಗಿತ್ತು. ಈ ಕುರಿತು ಪುರಸಭೆ ಹಲವು ಬಾರಿ ನೀಡಿದ ಸೂಚನೆಯನ್ನು ಅಂಗಡಿಗಳ ಮಾಲೀಕರು ಕಡೆಗಣಿಸಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಹಾಗಾಗಿ ಯಾವ ಸೂಚನೆ ನೀಡದೆ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಸಬ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಸೇರಿದಂತೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

ಭಾನುವಾರ ಪುನಃ ಅನಧಿಕೃತ ಅಂಗಡಿಗಳ ತೆರವುಕಾರ್ಯಾಚರಣೆ ಮುಂದುವರೆಯಲಿದ್ದು ಮಾರುತಿ ವೃತ್ತದಿಂದ ಕೊಪ್ಪಳ ರಸ್ತೆಯ ಎಡಭಾಗದಲ್ಲಿನ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವು ಗೊಳಿಸ ಲಾಗುತ್ತದೆ ಎಂದು ಸಬ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.

ಆಕ್ಷೇಪ: ಪೊಲೀಸರ ಕಾರ್ಯಾಚರಣೆ ಕುರಿತು ನಂತರ ಆಕ್ಷೇಪ ವ್ಯಕ್ತಪಡಿಸಿದ ಕೆಲ ಅಂಗಡಿಗಳ ಮಾಲೀಕರು, ಪಟ್ಟಣದ ಸುತ್ತ, ಅನೇಕ ಬಡಾವಣೆ, ಬಸವೇಶ್ವರ ವೃತ್ತದಿಂದ ಪುರಸಭೆವರೆಗಿನ ರಸ್ತೆಗಳಲ್ಲಿಯೂ ಅನೇಕ ಅಂಗಡಿಗಳಿವೆ.

ಬಸ್‌ನಿಲ್ದಾಣದಿಂದ ಎಕ್ಸಿಸ್ ಬ್ಯಾಂಕ್ ಶಾಖೆ ಮುಂದಿನ ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಕುಳಗಳು, ಕಾಂಪ್ಲೆಕ್ಸ್ ಮಾಲೀಕರು ರಸ್ತೆ ಜಾಗವನ್ನು ಕಬಳಿಸಿದ್ದಾರೆ. ಆದರೆ ಪುರಸಭೆ, ಪೊಲೀಸರು ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ. ದೈನಂದಿನ ಬದುಕಿನ ಹೊಟ್ಟೆ ಹೊರೆಯಲು ದುಡಿದು ಉಣ್ಣುವ ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.