ADVERTISEMENT

ಸಂಸದ ರಾಜಶೇಖರ ಹಿಟ್ನಾಳ ದೆಹಲಿ ನಿವಾಸದಲ್ಲಿ ಸಿಎಂ ಬಣಕ್ಕೆ ಔತಣಕೂಟ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:48 IST
Last Updated 9 ನವೆಂಬರ್ 2025, 6:48 IST
   

ಕೊಪ್ಪಳ: ಇಲ್ಲಿಯ ಸಂಸದ ರಾಜಶೇಖರ ಹಿಟ್ನಾಳ ಅವರ ದೆಹಲಿಯ ನಿವಾಸದಲ್ಲಿ ಈ ತಿಂಗಳ 15ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿರಿಗೆ ನಡೆಯಲಿರುವ ಔತಣಕೂಟದ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬದಲಾವಣೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರರಚನೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ದಿನೇ ದಿನೇ ಬಿಸಿ ಚರ್ಚೆ ನಡೆಯುತ್ತಿರುವಾಗಲೆ ಸಿದ್ದರಾಮಯ್ಯ ಅವರಿಗೆ ಆಪ್ತರೂ ಆಗಿರುವ ಸಂಸದ ರಾಜಶೇಖರ ಹಿಟ್ನಾಳ ಅವರ ನಿವಾಸದಲ್ಲಿ ಮುಖ್ಯಮಂತ್ರಿ ದೆಹಲಿ ಪ್ರವಾಸದ ಸಂದರ್ಭದಲ್ಲಿ ನಡೆಯಲಿರುವ ಔತಣಕೂಟದ ವಿಚಾರ ಬಹಳಷ್ಟು ಸದ್ದು ಮಾಡುತ್ತಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಜೊತೆಗೆ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು, ಸಂಸದರು ಮತ್ತು ಶಾಸಕರೂ ಭಾಗವಹಿಸುವ ಸಾಧ್ಯತೆ ಇದೆ. ಈ ವಿಷಯ ಕುರಿತು ರಾಜಕೀಯ ಚರ್ಚೆ ಅನಗತ್ಯ ಎಂದಿರುವ ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಊಹಾಪೋಹ ಅಲ್ಲಗಳೆದಿದ್ದು, ಎಲ್ಲವನ್ನೂ ಮಾಧ್ಯಮಗಳಿಗೆ ವಿವರಿಸುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಕಾಕತಾಳೀಯ ಎಂಬಂತೆ ನ.15ರ ನಂತರ ಎಲ್ಲ ರೀತಿಯ ಪ್ರವಾಸ, ಕಾರ್ಯಕ್ರಮಗಳನ್ನೂ ಸಂಸದ ರಾಜಶೇಖರ ಹಿಟ್ನಾಳ ಮತ್ತು ಅವರ ಸಹೋದರ, ಶಾಸಕ ರಾಘವೇಂದ್ರ ಹಿಟ್ನಾಳ ರದ್ದುಪಡಿಸಿರುವುದೂ ಚರ್ಚೆಗೆ ಗ್ರಾಸ ಒದಗಿಸಿದೆ.

ADVERTISEMENT

ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ; ಸಂಸದ

ಈ ವಿಷಯ ಕುರಿತು ಮಾತನಾಡಿರುವ ಸಂಸದ ರಾಜಶೇಖರ ಹಿಟ್ನಾಳ, ಈಗಷ್ಟೇ ದೆಹಲಿಯಲ್ಲಿ ನಿವಾಸ ದೊರೆತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.16 ರಿಂದ 18 ಮೂರು ದಿನ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಈ ಹೊತ್ತಿನಲ್ಲಿ ಮನೆಗೆ ಅವರನ್ನು ಊಟ, ಉಪಹಾರಕ್ಕೆ ಆತ್ಮೀಯತೆಯಿಂದ ಆಹ್ವಾನಿಸಲಾಗಿದೆ ಹೊರತು ಅದಕ್ಕೆ ಹೊಸದೇನೂ ಇಲ್ಲ. ರಾಜಕೀಯ ವಿಚಾರ ಬೆರೆಸುವ ಅಗತ್ಯವೂವಿಲ್ಲ. ಸಿದ್ದರಾಮಯ್ಯ ಅವರಿಗೆ ಎಲ್ಲರೂ ಆಪ್ತರೇ ಆಗಿದ್ದಾರೆ, ಮುಖ್ಯಮಂತ್ರಿಯ ಜೊತೆಗೆ ಇರುವವರೆಲ್ಲರೂ ಔತಣಕೂಟಕ್ಕೆ ಬರುತ್ತಿದ್ದು ಎಲ್ಲರನ್ನೂ ಆಹ್ವಾನಿಸುತ್ತೇವೆ ಎಂದರು.

ಮುಖ್ಯಮಂತ್ರಿ ಬದಲಾಗ್ತಾರೆ, ವಿಜಯೇಂದ್ರ ಬದಲಾಗುತ್ತಾರೆ, ಅಷ್ಟೇ ಏಕೆ 75 ವರ್ಷದ ನಂತರ ಪ್ರಧಾನಿ ನರೇಂದ್ರ ಮೋದಿಯೂ ನಿವೃತ್ತರಾಗುತ್ತಾರೆ ಎಂಬಿತ್ಯಾದಿ ಎಲ್ಲ ರೀತಿಯ ಚರ್ಚೆಗಳೂ ಮಾಧ್ಯಮಗಳಲ್ಲಿ ನಡೆಯುತ್ತಿರುತ್ತವೆ. ಆದರೆ ಸಿಎಂ ಬದಲಾವಣೆ ವಿಚಾರವನ್ನು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಎಲ್ಲೂ ಹೇಳಿಲ್ಲ. ಅವರೇ ಐದು ವಷ್ ಅವಧಿ ಪೂರೈಸಲಿದ್ದಾರೆ ಎಂಬುದನ್ನು ಪಕ್ಷದ ಹಿರಿಯ ನಾಯಕರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.

ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಂಸದ, ಸಚಿವರಾಗುವ ಅರ್ಹತೆ ಕಾಂಗ್ರೆಸ್‌ ಪಕ್ಷದಲ್ಲಿ ಬಹಳಷ್ಟು ಶಾಸಕರಿಗಿದೆ, ಮೂರು ಬಾರಿ ಶಾಸಕರಾಗಿರುವ ಸಹೋದರ ರಾಘವೇಂದ್ರ ಹಿಟ್ನಾಳ ಕೂಡ ಸಚಿವ ಆಕಾಂಕ್ಷಿಯಾಗಿದ್ದಾರೆ. ಈ ಎಲ್ಲವನ್ನೂ ಹೈಕಮಾಂಡ್ ಸಮರ್ಥವಾಗಿ ನಿಭಾಯಿಸಲಿದೆ. ಹೀಗಿರುವಾರ ಯಾವ ಕ್ರಾಂತಿಯೂ ಇಲ್ಲ ನಮ್ಮ ಮುಂದೆ ಇರುವುದು ಅಭಿವೃದ್ಧಿ ಕ್ರಾಂತಿ ಮಾತ್ರ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.