
ಕುಕನೂರು: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ರೈತರ ತರಕಾರಿ, ದ್ರಾಕ್ಷಿ, ಧಾನ್ಯ ಕೆಡದಂತೆ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಲಾಗಿದೆ. ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ.
ರೈತರ ಪರಿಸ್ಥಿತಿಯನ್ನು ಮನಗಂಡ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ₹6.65 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಿದ್ದಾರೆ.
ಕೋಲ್ಡ್ ಸ್ಟೋರೇಜ್ ಘಟಕದ ಪ್ಲಿಂತ್ ವಿಸ್ತೀರ್ಣ 2015 ಚ.ಮೀ. ಹಾಗೂ ಘಟಕದ ಸ್ಟೋರೇಜ್ 2200 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 8 ಕೋಲ್ಡ್ ರೂಮ್‌ಗಳಿದ್ದು, ಪ್ರತಿಯೊಂದು 275 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿವೆ.
ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಎಕರೆಯಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಪ್ರತಿ ವರ್ಷ ಟನ್‌ಗಟ್ಟಲೆ ಕಾಳು–ಕಡಿ ಉತ್ಪಾದನೆಯಾಗುತ್ತದೆ. ಬೆಲೆಯ ಏರಿಳಿತ ಕಾಯಂ. ದೀರ್ಘಕಾಲ ಶೇಖರಿಸಿಟ್ಟು ಮಾರಾಟ ಮಾಡಲು ಶೈತ್ಯಾಗಾರಗಳ ವ್ಯವಸ್ಥೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರಲಿಲ್ಲ.
ದೊಡ್ಡ ಸವಾಲು: ಬೆಲೆ ಕುಸಿತ ಹಾಗೂ ಹೆಚ್ಚಿನ ಫಸಲು ಬಂದ ಸಂದರ್ಭದಲ್ಲಿ ಕಡಲೆ, ಮೆಕ್ಕೆಜೋಳ ಬೆಳೆಗಾರರು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಬೇಗನೆ ಕೊಳೆತು ಹೋಗುವ ಹಣ್ಣು ಹಾಗೂ ತರಕಾರಿ ರಕ್ಷಿಸುವುದು ರೈತರಿಗೆ ನಿಜಕ್ಕೂ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಅವು ಕೆಡದಂತೆ ಹೆಚ್ಚಿನ ದಿನಗಳವರೆಗೆ ಸಂರಕ್ಷಿಸಲು ಶೈತ್ಯಾಗಾರ ಆರಂಭಿಸಬೇಕು ಎಂಬುದು ರೈತರ ಒತ್ತಾಯವಾಗಿತ್ತು.
ತರಕಾರಿ ಹಾಗೂ ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬೇಕು ಎಂಬ ಕೂಗು ಬಲವಾಗಿತ್ತು. ಇದಕ್ಕೆ ಪೂರಕವಾಗಿ ಶಾಸಕರು ಮಾರುಕಟ್ಟೆ ಹಾಗೂ ರಫ್ತು ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂದಾಗಿದ್ದಾರೆ.
ಈ ಭಾಗದಲ್ಲಿ ತರಕಾರಿ ದ್ರಾಕ್ಷಿ ಧಾನ್ಯ ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗಲಿದೆ. ಬೆಲೆ ಬಂದಾಗ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು– ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ
ಬೆಳೆಗಳನ್ನು ಹೆಚ್ಚು ದಿನ ದಾಸ್ತಾನು ಮಾಡಲು ಶೈತ್ಯಾಗಾರಗಳಿರಲಿಲ್ಲ. ರೈತರು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಬೇಕಾಗಿತ್ತು. ಶಾಸಕರು ಎಪಿಎಂಸಿ ಪ್ರಾಂಗಣಗಳಲ್ಲಿ ಬೃಹತ್ ಶಿಥಲೀಕರಣ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.– ರವಿ ಗದಿಗಿನ, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.