ಕನಕಗಿರಿ: ‘ತಾಲ್ಲೂಕಿನ ನವಲಿ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದ ಜಾಗವನ್ನು ಬಿಜೆಪಿ ಮುಖಂಡ ವೀರೇಶ ನಾಗವಂಶಿ ಅವರು ಕಬಳಿಸಲು ಯತ್ನಿಸುತ್ತಿದ್ದಾರೆ’ ಎಂದು ಕರ್ನಾಟಕ ಭೀಮಸೇನಾ ಸಮಿತಿ ಜಿಲ್ಲಾಧ್ಯಕ್ಷ ಭೀಮಪ್ಪ ದೊಡ್ಡಮನಿ ಹಾಗೂ ಕೆಡಿಪಿ ಸದಸ್ಯ ವೀರೇಶ ಹರಿಜನ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ಪರಿಶಿಷ್ಟ ಜಾತಿಯವರಿಗೆ ಹಾಗೂ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲು ಸಮುದಾಯ ಭವನದ ಜಾಗವನ್ನು ಅನೇಕ ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬರಲಾಗಿದೆ. ಈಗ
ಅಕ್ರಮವಾಗಿ ಮನೆ ಕಟ್ಟಲು ಮುಂದಾಗಿರುವ ನಾಗವಂಶಿ ಅವರು 2020ರಲ್ಲಿ ಈ ಜಾಗದಲ್ಲಿ ಯಾರೂ ಕಲ್ಲು, ಕಟ್ಟಿಗೆ, ತಿಪ್ಪೆಗುಂಡಿ ಹಾಕಬಾರದು. ದವಸ–ಧಾನ್ಯದ ಚೀಲಗಳನ್ನೂ ಇಡಬಾರದು. ಕಲ್ಯಾಣ ಕಾರ್ಯಕ್ರಮಗಳಿಗೆ ಈ ಜಾಗ ಮೀಸಲಿರಲಿ ಎಂದು ಸೂಚಿಸಿದ್ದರು. ಈಗ ತಾವೇ ಜಾಗವನ್ನು ಕಬಳಿಸಿ ಮನೆ ನಿರ್ಮಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.
‘ಮನೆ ನಿರ್ಮಾಣದ ಜಾಗಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ನಾಗವಂಶಿ ಅವರಲ್ಲಿ ಇಲ್ಲ. ದೌರ್ಜನ್ಯ, ದಬ್ಬಾಳಿಕೆ ನಡೆಸಿ ಜಾಗವನ್ನು ಅತಿಕ್ರಮಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಪರಿಶಿಷ್ಟ ಜಾತಿಯ ಕಾಲೊನಿಯ ಜನರು ಜಿಲ್ಲಾಧಿಕಾರಿ ಸೇರಿ ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮ ಅತಿಕ್ರಮಣ ನಿಂತಿದೆ. ಇಲ್ಲಿ ಸಚಿವ ಶಿವರಾಜ ತಂಗಡಗಿಯವರ ಪಾತ್ರವಿಲ್ಲ. ಬಿಜೆಪಿಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಜಾಗದ ವಿಷಯವನ್ನು ರಾಜಕೀಯಕ್ಕೆ ಎಳೆದು ತಂದು ತಂಗಡಗಿ ಅವರ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಮುದಾಯ ಭವನದಿಂದ ಹತ್ತು ಅಡಿ ಜಾಗ ಬಿಟ್ಟು ಮನೆ ನಿರ್ಮಾಣ ಮಾಡಿಕೊಂಡರೆ ಯಾರ ತಕರಾರೂ ಇಲ್ಲ. ಹಟಕ್ಕೆ ಬಿದ್ದವರಂತೆ ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದಕ್ಕೆ ತಮ್ಮ ವಿರೋಧವಿದೆ. ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಹಾಗೂ ಪಿಐ ಅವರು ತಮ್ಮ ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಂದ ಜಾಗ ಉಳಿದಿದೆ. ತನಗೆ ಜಾಗ ದಕ್ಕುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ದೂರುತ್ತಿರುವುದು ಸರಿಯಲ್ಲ. ದಲಿತ ಸಮುದಾಯ ಅಧಿಕಾರಿಗಳ ಕಾರ್ಯ ವೈಖರಿಗೆ ಅಭಿನಂದನೆ ಸಲ್ಲಿಸುತ್ತದೆ’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೇಮಣ್ಣ, ಎಸ್.ಸಿ ಕಾಲೊನಿಯ ಪ್ರಮುಖರಾದ ಅಯ್ಯಪ್ಪ ಮಾದಿಗ, ಹನುಮಂತ ಮಾದಿಗ, ಮಾರುತಿ ಮಾದಿಗ, ಲಕ್ಷ್ಮಣ ಮಾದಿಗ, ವೆಂಕೋಬ ಮಾದಿಗ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.