ADVERTISEMENT

‘ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ’

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:52 IST
Last Updated 1 ಸೆಪ್ಟೆಂಬರ್ 2022, 16:52 IST
ಕೊಪ್ಪಳದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ್ ಮಾತನಾಡಿದರು
ಕೊಪ್ಪಳದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ್ ಮಾತನಾಡಿದರು   

ಕೊಪ್ಪಳ: ‘ಮಹಿಳೆಯರು ತಮಗೆ ಕಾಡುವ ಅನೇಕ ಗಂಭೀರ ಕಾಯಿಲೆಗಳ ಪರೀಕ್ಷೆ ಹಾಗೂ ಚಿಕಿತ್ಸೆಗೆ ಹಿಂಜರಿಯುವುದು ಸಾಮಾನ್ಯ. ಅಂತಹ ಮಹಿಳೆಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅಗತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು’ ಎಂದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಟಿ.ಕೆ.ಅನಿಲಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ‘30 ವರ್ಷ ಮೇಲಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ಯಾವ ಲಕ್ಷಣಗಳನ್ನು ತೋರ್ಪಡಿಸದೆ ಪ್ರಾಣಕ್ಕೆ ಕಂಟಕವಾಗುತ್ತವೆ. ಆರೋಗ್ಯ ಇಲಾಖೆಯಿಂದ ನಡೆಸಲಾಗುವ 30 ವರ್ಷ ಮೇಲಿನವರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳ ತಪಾಸಣೆ ಜೊತೆಗೆ ಮಾರಕ ಕಾಯಿಲೆಗಳ ಬಗ್ಗೆಯೂ ಪರೀಕ್ಷೆ ಮಾಡಿಸಬೇಕು’ ಎಂದರು.

‘ಆಸ್ಪತ್ರೆಗೆ ದಾಖಲಾಗುವ ಹೆರಿಗೆ ಪ್ರಕರಣಗಳಲ್ಲಿ ಸಹಜ ಹೆರಿಗೆ ಮಾಡಿಸಲು ಮೊದಲ ಆದ್ಯತೆ ನೀಡಬೇಕು. ಮಹಿಳೆಯರು ಸಹಜ ಹೆರಿಗೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಗಂಭೀರ ಪರಿಸ್ಥಿತಿಗೆ ತಲುಪದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ವೈದ್ಯಕೀಯ ಸಲಹೆ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆಯರಿಂದ ಮಾಹಿತಿನೀಡಿ ಜಾಗೃತಿ ಮೂಡಿಸಬೇಕು. ಗಂಭೀರ ಪರಿಸ್ಥಿತಿ ಅಲ್ಲದ ಹೊರತು ಸಿಸೇರಿಯನ್ ಹೆರಿಗೆ ಮಾಡಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಅನಿಲಕುಮಾರ್ ಹೇಳಿದರು.

ADVERTISEMENT

‘ತಾಯಿ ಹಾಗೂ ಶಿಶುವಿನ ಮರಣ ಪ್ರಮಾಣ ತಗ್ಗಿಸಲು ಕಾಲಕಾಲಕ್ಕೆ ಆರೋಗ್ಯದ ತಪಾಸಣೆ ಮಾಡಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಬಿ. ಫೌಜಿಯಾ ತರನ್ನುಮ್,ಉಪಕಾರ್ಯದರ್ಶಿ ಸಮೀರ್ ಮುಲ್ಲಾ,ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಉಪ ವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.