ಕೊಪ್ಪಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಎಲ್ಲ ಜಾತಿಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪಟ್ಟಿಯಲ್ಲಿ ಹಿಂದೂಗಳ ಜಾತಿಯ ಹಿಂದೆ ಕ್ರಿಶ್ಚಿಯನ್ ಎಂದು ಸೇರಿಸುವ ಮೂಲಕ ಕಾಂಗ್ರೆಸ್ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕಸರತ್ತು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಲಿಂಗಾಯತ, ರೆಡ್ಡಿ, ಬ್ರಾಹ್ಮಣ ಹೆಸರಿನ ಮುಂದೆ ಕ್ರಿಶ್ಚಿಯನ್ ಎಂದು ಪಟ್ಟಿಯಲ್ಲಿ ನಮೂದಿಸಲಾಗಿದೆ. ಹಿಂದೂ ಸಮಾಜದಲ್ಲಿರುವ ಎಲ್ಲ ಜಾತಿಗಳ ಜೊತೆ ಕ್ರಿಶ್ಚಿಯನ್ ಪದ ಸೇರಿಸಿ ಮತಾಂತರ ಆಗುವವರಿಗೆ ಪ್ರೇರೇಪಣೆ ನೀಡುವಂತಿದೆ. ಎಲ್ಲ ಜಾತಿಗಳು ಕ್ರಿಶ್ಚಿಯನ್‌ನಲ್ಲಿದ್ದರೆ ಲಾಭ ಆಗಬಹುದು ಎಂದು ರಾಜ್ಯ ಸರ್ಕಾರ ಲೆಕ್ಕಾಚಾರ ಹೊಂದಿದೆ’ ಎಂದರು.
‘ಹಿಂದೂ ಸಮಾಜವನ್ನು ನಾಶ ಮಾಡಲು ಪ್ರಯತ್ನದಲ್ಲಿರುವ ಕಾಂಗ್ರೆಸ್ ಇದೇ ವಿಷಯದಲ್ಲಿ ತಾನೇ ನಾಶವಾಗಿ ಹೋಗುತ್ತದೆ. ಹಿಂದೆಯೂ ಹಿಂದೂ ಸಮಾಜವನ್ನು ಒಡೆಯಲು ಸಾಕಷ್ಟು ಜನ ಪ್ರಯತ್ನ ಮಾಡಿದರೂ ದೊಡ್ಡಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಹಿಂದೂಗಳು ಎಲ್ಲಿಯೇ ಹೋದರೂ ಮನೆ ಇಲ್ಲದಿದ್ದರೂ ದೇವಸ್ಥಾನ ಚೆನ್ನಾಗಿರಬೇಕು ಎಂದು ಬಯಸುತ್ತಾರೆ’ ಎಂದು ಹೇಳಿದರು.
ಗಂಗಾವತಿಯಲ್ಲಿ ನಡೆದ ಅಕ್ರಮ ಅಕ್ಕಿ ಸಾಗಾಣೆಕೆ ಯತ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ‘ಸರ್ಕಾರದ ಅಕ್ಕಿಯನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಪಾಲಿಷ್ ಮಾಡಿ ಒಳ್ಳೆಯ ಅಕ್ಕಿ ಜೊತೆ ಮಿಶ್ರಣ ಮಾಡಿ ವಿದೇಶಕ್ಕೆ ಮಾರಾಟ ಮಾಡುವ ದೊಡ್ಡಜಾಲವೇ ಇದೆ. ಇದೆಲ್ಲವೂ ಗೊತ್ತಿದ್ದರೂ ಸರ್ಕಾರ ಸುಮ್ಮನಿದೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.