ಕುಷ್ಟಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಬಳಿಸಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಕಾರ್ಗಿಲ್ ಹುತಾತ್ಮ ಯೋಧ ಮಲ್ಲಯ್ಯ ವೃತ್ತದ ಬಳಿ ಬಹಿರಂಗ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಶೇಖರಗೌಡ ಮಾಲಿಪಾಟೀಲ, ಲಾಡ್ಲೆಮಷಾಕ ದೋಟಿಹಾಳ, ಮಾನಪ್ಪ ತಳವಾರ, ಪುರಸಭೆ ಸದಸ್ಯ ಮೈನುದ್ದೀನ ಮುಲ್ಲಾ, ‘ಬಿಜೆಪಿ ದೇಶದಲ್ಲಿನ ಪವಿತ್ರ ಮತದಾನ ವ್ಯವಸ್ಥೆಯನ್ನು ಹಾಳು ಮಾಡಿ ಅಧಿಕಾರಕ್ಕೆ ಬಂದಿದೆ. ಬೇರೆ ಬೇರೆ ಕಳ್ಳತನ ಮಾಡುವುದನ್ನು ಕಂಡಿದ್ದೆವು. ಆದರೆ ಮತಗಳನ್ನೂ ಕಳವು ಮಾಡಿ ಅದರ ಶ್ರೇಷ್ಠತೆಗೆ ಕಳಂಕತ ತಂದಂಥ ಘೋರ ಅಪರಾಧವನ್ನು ದೇಶ ಎಂದೂ ಕಂಡಿದ್ದಿಲ್ಲ. ಬೇರೆ ಕಳ್ಳರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಮತಗಳ್ಳರು ರಾಜಾರೋಷವಾಗಿ ಅಧಿಕಾರ ನಡೆಸಿದ್ದು ತಕ್ಷಣ ಅಧಿಕಾರದಿಂದ ಕೆಳಗಿಳಿಯಲಿ’ ಎಂದು ಒತ್ತಾಯಿಸಿದರು.
ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಶಿವಶಂಕರಗೌಡ ಪಾಟೀಲ, ಸೋಮಶೇಖರ ವೈಜಾಪುರ, ಶಂಕರಗೌಡ ಪಾಟೀಲ, ತಿಪ್ಪಣ್ಣ, ಇಮಾಮಸಾಬ್ ಗರಡಿಮನಿ, ಮೆಹಬೂಬ್ ಕಮ್ಮಾರ, ಶೌಕತ್ ಕಾಯಿಗಡ್ಡಿ, ಹುಸೇನ ಕಾಯಿಗಡ್ಡಿ, ಬಸವರಾಜ ಭೋವಿ ಇತರರು ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.