
ಕೊಪ್ಪಳ: ‘ಬಿಜೆಪಿ, ದಲಿತ ಹಾಗೂ ರೈತ ಸಂಘಟನೆಗಳನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ಜಾರಿಗೆ ತರಲು ಮುಂದಾಗಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿರುವುದು ಗೂಂಡಾ ಮತ್ತು ಹಿಟ್ಲರ್ ಸರ್ಕಾರ. ಹೋರಾಟಗಾರರು ಮತ್ತು ವಿರೋಧ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸರ್ಕಾರದ ಮುಖ್ಯ ಉದ್ದೇಶ. ಈ ಮೂಲಕ ವಾಕ್ ಸ್ವಾತಂತ್ರ್ಯಕ್ಕೆ ನೇರವಾಗಿ ಪೆಟ್ಟು ಕೊಡುತ್ತಿರುವ ರಾಜ್ಯ ಸರ್ಕಾರ ಹಿಟ್ಲರ್ ರೀತಿಯಲ್ಲಿ ವರ್ತನೆ ಮಾಡುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರು ಒಂದು ಟ್ವಿಟ್ ಮಾಡಿದರೆ, ಯಾವುದಾದರೂ ಅಭಿಪ್ರಾಯ ಫಾರ್ವರ್ಡ್ ಮಾಡಿದರೂ ಜೈಲಿಗೆ ಹಾಕುತ್ತಿದ್ದಾರೆ’ ಎಂದರು.
‘ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಐದು ವರ್ಷ ಗ್ಯಾರಂಟಿ ಯೋಜನೆ ಹೆಸರು ಹೇಳಿಕೊಂಡು ಹೋಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಬಾರಿ ಕಲಬುರಗಿಗೆ ಹೋಗಿ ₹24 ಸಾವಿರ ಕೋಟಿ ಯೋಜನೆ ಘೋಷಣೆ ಮಾಡಿದ್ದರೂ ₹24 ಕೂಡ ಬಿಡುಗಡೆಯಾಗಿಲ್ಲ. ಏನೂ ಮಾಡದೆ ಈಗಿನ ಸರ್ಕಾರ ಜನರಿಂದ ಚಪ್ಪಾಳೆ ಹೊಡೆಸಿಕೊಳ್ಳುತ್ತಿದೆ’ ಎಂದು ದೂರಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ನಾವು ಸಂವಿಧಾನಿಕ ಹೋರಾಟ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಗೂಂಡಾ ಸಂಸ್ಕೃತಿ ನಮ್ಮಲ್ಲಿ ಇದೆ ಎಂದು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಿದ್ದಾರೆ’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಪಕ್ಷದ ರಾಜ್ಯದ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಚಂದ್ರಶೇಖರ ಹಲಗೇರಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.