ADVERTISEMENT

ಕೊಪ್ಪಳ | ಸೇವಾ ನ್ಯೂನತೆ: ಬಡ್ಡಿ ಸಹಿತ ಮೊತ್ತ ಪಾವತಿಸಲು ಆದೇಶ

ಸೇವಾ ನ್ಯೂನತೆ: ಆಯೋಗದ ನೋಟಿಸ್‌ಗೂ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:48 IST
Last Updated 30 ಅಕ್ಟೋಬರ್ 2025, 5:48 IST
   
ಸುರಕ್ಷಾಬಂಧು ಚಿಟ್ಸ್ ಸಂಸ್ಥೆಗೆ ದಂಡ ಪಾವತಿ | 2023ರಲ್ಲಿ ವಾಷಿಂಗ್‌ ಮಷಿನ್ ಖರೀದಿಸಿದ್ದ ಪ್ರಲ್ಹಾದ ಅಗಳಿ | ದೂರುದಾರರಿಗೆ ಉಂಟಾದ ಯಾತನೆಗೆ ₹10 ಸಾವಿರ ಪಾವತಿಸಲು ಸೂಚನೆ

ಕೊಪ್ಪಳ: ನಿಶ್ಚಿತ ಠೇವಣಿಯ ಅವಧಿ ಮುಗಿದ ನಂತರವೂ ಹಣ ಪಾವತಿಸಲು ಸತಾಯಿಸಿದ ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್‌ನ ಸುರಕ್ಷಾಬಂಧು ಚಿಟ್ಸ್ (ಕರ್ನಾಟಕ) ಸಂಸ್ಥೆಗೆ ದಂಡ ಸಹಿತ ಮೆಚ್ಯೂರಿಟಿ ಮೊತ್ತ ದೂರುದಾರರಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಹೊಸಪೇಟೆಯ ಮೊದಲ ದೂರುದಾರ ಶಶಿಧರ ಎ.ಬಸವನಗೌಡ ಹಾಗೂ ಇನ್ನಿಬ್ಬರು ಸುರಕ್ಷಾಬಂಧು ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಗೆ ಎಫ್.ಡಿ ಮಾಡಿಸಿದ್ದರು. ಅವಧಿ ಪೂರ್ಣಗೊಂಡ ನಂತರ ಹಣ ಪಾವತಿಸುವಂತೆ ದೂರುದಾರರು ಸಂಸ್ಥೆಯ ನಿರ್ದೇಶಕರಾದ ಗೌರಮ್ಮ ಮಹಾಲಿಂಗಪ್ಪ ಹಾಗೂ ವಿನಯಕುಮಾರ ಮಹಾಲಿಂಗಪ್ಪ ಅವರ ಬಳಿ ಕೇಳಿದ್ದರು. ಆದರೆ, ಅವರು ಸತಾಯಿಸಿದ್ದರಿಂದ ದೂರುದಾರರು ಆಯೋಗದ ಮೊರೆ ಹೋಗಿದ್ದರು. ಆಯೋಗ ನೋಟಿಸ್‌ ಜಾರಿ ಮಾಡಿದ ಬಳಿಕವೂ ಗೈರು ಹಾಜರಾಗಿದ್ದಾರೆ.

ಆದ್ದರಿಂದ ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮಿ ಹಾಗೂ ಸದಸ್ಯ ರಾಜು ಎನ್.ಮೇತ್ರಿ ಅವರು ವಿಚಾರಣೆ ನಡೆಸಿ ಎಫ್.ಡಿ ಮೊತ್ತ ಮೊದಲ ದೂರುದಾರರಿಗೆ ₹3.50 ಲಕ್ಷ, 2ನೇ ದೂರುದಾರರಿಗೆ ₹10 ಲಕ್ಷ ಹಾಗೂ 3ನೇ ದೂರುದಾರರಿಗೆ ₹10 ಲಕ್ಷಕ್ಕೆ ತಲಾ ಶೇ 6ರ ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವ ತನಕ ನೀಡಬೇಕು ಎಂದು ಆದೇಶ ನೀಡಿದೆ. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗೆ ₹10 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರ ನೀಡುವಂತೆಯೂ ಹೇಳಿದೆ.

ADVERTISEMENT

ಪರಿಹಾರಕ್ಕೆ ಆದೇಶ: ಗ್ರಾಹಕರಿಗೆ ಸೇವೆ ನೀಡುವಲ್ಲಿ ನ್ಯೂನತೆ ಎಸಗಿದ ಕೊಪ್ಪಳದ ಮಾರುತಿ ಎಲೆಕ್ರ್ಟಾನಿಕ್ಸ್‌ ಅಂಗಡಿ ಮಾಲೀಕರಿಗೆ ಬಡ್ಡಿ ಸಹಿತ ಪರಿಹಾರ ಮೊತ್ತ ದೂರುದಾರರಿಗೆ ಪಾವತಿಸುವಂತೆ ಆಯೋಗ ಆದೇಶಿಸಿದೆ. 

ದೂರುದಾರರಾದ ಕೊಪ್ಪಳದ ಪ್ರಲ್ಹಾದ ಶ್ರೀಶಪ್ಪ ಅಗಳಿ 2023ರ ಜುಲೈ 7ರಂದು ಮಾರುತಿ ಅಂಗಡಿಯಲ್ಲಿ ₹25,500 ಪಾವತಿಸಿ ವಾಷಿಂಗ್ ಮಷಿನ್‌ ಖರೀದಿಸಿದ್ದರು. ಕೆಲವೇ ದಿನಗಳಲ್ಲಿ ಮಷಿನ್ ಒಳಗಿನ ಡ್ರಮ್ ತುಕ್ಕು ಹಿಡಿದಿತ್ತು. ಆದ್ದರಿಂದ ಬಳಕೆಯನ್ನು ಗ್ರಾಹಕರು ನಿಲ್ಲಿಸಿದ್ದರು.

ಸಮಸ್ಯೆ ಪರಿಹರಿಸಿಕೊಡುವಂತೆ ದೂರುದಾರರು ಮನವಿ ಮಾಡಿದ್ದರೂ ಸ್ಪಂದಿಸದ ಕಾರಣ ಆಯೋಗದ ಮೊರೆ ಹೋಗಿದ್ದರು. ಆಯೋಗ ಖುದ್ದು ನೋಟಿಸ್ ಜಾರಿ ಮಾಡಿದ್ದರೂ ಅಂಗಡಿಯವರು ತಕರಾರು ಸಲ್ಲಿಸಿಲ್ಲ. ಆದ್ದರಿಂದ ಗ್ರಾಹಕರಿಗೆ ಯಂತ್ರ ಖರೀದಿಯ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವ ತನಕ ನೀಡಬೇಕು. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗೆ ₹10 ಸಾವಿರ ಮತ್ತು ದೂರಿನ ಖರ್ಚು ₹5 ಸಾವಿರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.