ADVERTISEMENT

ವಿವಾಹದ ಫೊಟೊ, ವಿಡಿಯೊ ಸಮರ್ಪಕ: ದಂಡ ರೂಪದ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:21 IST
Last Updated 15 ಆಗಸ್ಟ್ 2025, 6:21 IST
   

ಕೊಪ್ಪಳ: ವಿವಾಹಪೂರ್ವ ಮತ್ತು ವಿವಾಹದ ಫೊಟೊ ಮತ್ತು ವಿಡಿಯೊಗಳನ್ನು ಸಮರ್ಪಕ ರೀತಿಯಲ್ಲಿ ಸಿದ್ಧಪಡಿಸಿ ನೀಡದೆ ನಿರ್ಲಕ್ಷ್ಯವಹಿಸಿ ಸೇವಾ ನ್ಯೂನತೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದವರಿಗೆ ₹25 ಸಾವಿರ ಪರಿಹಾರ ಮತ್ತು ₹ 5 ಸಾವಿರ ದೂರಿನ ಖರ್ಚನ್ನು ಬಡ್ಡಿ ಸಹಿತ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಆಗಿದ್ದೇನು: ನಗರದ ನಿವಾಸಿಗಳಾದ ಲೇಖನಾ ಮತ್ತು ಅರ್ಪಣ್ ಎಂಬುವವರ ಮದುವೆ ಸಮಾರಂಭ 2022ರ ನ.28-30ರ ವರೆಗೆ ನಡೆದಿದ್ದು ವಿವಾಹಪೂರ್ವದ ಮತ್ತು ವಿವಾಹದ ಫೋಟೊಗಳು ಹಾಗೂ ವಿಡಿಯೊಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ರೋಷನ್‌ ಕ್ರಿಸ್ಟೋಫರ್ ಮತ್ತು ಇಮ್ಯಾನುಲ್ ಎಂಬುವವರಿಗೆ ಸೇರಿದ ಬೆಂಗಳೂರಿನ ವೆಡ್‌ಹುಡ್ಸ್ ವೂವ್‌ಲೆಕ್ಸ್‌ ಸಂಸ್ಥೆಯೊಂದಿಗೆ ಒಟ್ಟು ₹ 1.20 ಲಕ್ಷ ಮೊತ್ತ ಪಾವತಿಸುವ ಕುರಿತು ಒಪ್ಪಂದವಾಗಿತ್ತು. ಅದರ ಪ್ರಕಾರ ದೂರುದಾರರು ಹಂತ ಹಂತವಾಗಿ ಫೋನ್‌ಪೇ ಮೂಲಕ ಒಟ್ಟು ₹1 ಲಕ್ಷ ಹಣ ಎದುರುದಾರರ ಖಾತೆಗೆ ಜಮೆ ಮಾಡಿದ್ದರು. ಒಪ್ಪಂದದ ಪ್ರಕಾರ ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ಮೂರು ದಿನಗಳ ಅವಧಿಯಲ್ಲಿ ಫೋಟೊ ವಿಡಿಯೊ ತೆಗೆದುಕೊಡಬೇಕಿತ್ತು.

ಆದರೆ ಒಪ್ಪಂದದ ಪ್ರಕಾರ ಸಂಬಂಧಿಸಿದ ಎದುರುದಾರರು ಸಮರ್ಪಕ ರೀತಿಯಲ್ಲಿ ಫೋಟೊ ವಿಡಿಯೊಗಳನ್ನು ಮಾಡಿಕೊಡದೆ ನಿರ್ಲಕ್ಷ್ಯತೆ ತೋರುವ ಮೂಲಕ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ದೂರುದಾರರಾದ ಲೇಖನಾ ಮತ್ತು ಅರ್ಪಣ್ ಅವರು ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಿಹಾರ ಕೋರಿ ದೂರು ದಾಖಲಿಸಿದ್ದರು.

ADVERTISEMENT

ಈ ಕುರಿತು ಆಯೋಗವು ಎದುರುದಾರರಿಗೆ ನೋಟಿಸನ್ನು ಖುದ್ದಾಗಿ ಜಾರಿ ಮಾಡಿತ್ತು. ನಂತರ ಎದುರುದಾರರು ತಮ್ಮ ವಕೀಲರ ಮೂಲಕ ಆಕ್ಷೇಪಣೆ ಮತ್ತು ವಿಚಾರಣೆಗೆ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮಿ, ಸದಸ್ಯರಾದ ರಾಜು.ಎನ್‌.ಮೇತ್ರಿ ಅವರು ದಾಖಲೆ ಪರಿಶೀಲಿಸಿ ಮತ್ತು ವಾದ ಆಲಿಸಿದ್ದರು. ಅಲ್ಲದೆ ಫೋಟೊ ಮತ್ತು ವಿಡಿಯೊಗಳನ್ನು ನೀಡುವಲ್ಲಿ ವಿಳಂಬ ಹಾಗೂ ಅವುಗಳನ್ನು ಸಮರ್ಪಕ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಒದಗಿಸುವಲ್ಲಿ ಎದುರುದಾರರು ವಿಫಲರಾಗಿ ಸೇವೆಯಲ್ಲಿ ನ್ಯೂನತೆ ಎಸಗಿದ್ದಾರೆ ಎಂಬುದನ್ನು ಆಯೋಗ ನಿರ್ಧರಿಸಿತ್ತು.

ಈ ಕಾರಣಕ್ಕೆ ಎದುರುದಾರರು ದೂರುದಾರರಿಗೆ ಪರಿಹಾರ ರೂಪದಲ್ಲಿ ₹ 25,000 ಹಣವನ್ನು ವಾರ್ಷಿಕ ಶೇ 6ರ ಬಡ್ಡಿ ದರದೊಂದಿಗೆ ದೂರು ನೀಡಿದ ದಿನಾಂಕದಿಂದ ಪರಿಹಾರ ಮೊತ್ತ ಪಾವತಿಯಾಗುವವರೆಗೆ ನೀಡಬೇಕು. ಅದೇ ರೀತಿ ₹ 5,000 ದೂರಿಗೆ ಸಂಬಂಧಿಸಿದ ಖರ್ಚಿನ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.

ಈ ಪರಿಹಾರದ ಮೊತ್ತವನ್ನು ಆದೇಶ ಪ್ರಕಟವಾದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ಫಿರ್ಯಾದುದಾರರಿಗೆ ಪಾವತಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.