ADVERTISEMENT

ಸಂಪೂರ್ಣ ಲಾಕ್‌ಡೌನ್‌: ಜನವೋ ಜನ

ಪರಿಣಾಮಕಾರಿಯಾಗದ ಜನತಾ ಕರ್ಫ್ಯೂ: ಕಠಿಣ ನಿಯಮಗಳ ಜಾರಿಗೆ ಸರ್ಕಾರದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:57 IST
Last Updated 8 ಮೇ 2021, 4:57 IST
ಕೊಪ್ಪಳದ ಜವಾಹರ್ ರಸ್ತೆಯಲ್ಲಿ ಲಾಕ್‍ಡೌನ್ ಲೆಕ್ಕಿಸದೇ ಪರಸ್ಪರ ಅಂತರ ಕಾಪಾಡಿಕೊಳ್ಳದೆ ಸಂಚರಿಸುತ್ತಿರುವ ಸಾರ್ವಜನಿಕರು
ಕೊಪ್ಪಳದ ಜವಾಹರ್ ರಸ್ತೆಯಲ್ಲಿ ಲಾಕ್‍ಡೌನ್ ಲೆಕ್ಕಿಸದೇ ಪರಸ್ಪರ ಅಂತರ ಕಾಪಾಡಿಕೊಳ್ಳದೆ ಸಂಚರಿಸುತ್ತಿರುವ ಸಾರ್ವಜನಿಕರು   

ಕೊಪ್ಪಳ: ಜನತಾ ಕರ್ಫ್ಯೂ ಹೇರಿದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಆತಂಕ ತಂದಿದೆ.

ಕೊರೊನಾ ಸೋಂಕು ತಡೆಯಲು ಮೇ 10 ರಿಂದ 14 ದಿನಗಳ ಕಾಲ ಸರ್ಕಾರ ಸಂಪೂರ್ಣ ಲಾಕ್‌ಡೌನ್‌ ಮಾಡುತ್ತದೆ ಎನ್ನುವುದು ಜನರಲ್ಲಿ ಮತ್ತಷ್ಟು ಗೊಂದಲ, ಗಲಿಬಿಲಿ ಉಂಟು ಮಾಡಿದೆ. ಪ್ರಖರ ಬಿಸಿಲು, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ ಬಹುವಾಗಿ ಕಾಡುತ್ತಿದ್ದರೂ ಕೊರೊನಾ ಎರಡನೇ ಅಲೆಯ ಮಧ್ಯೆ ಎಲ್ಲ ಸಮಸ್ಯೆಗಳು ಮರೆತು ಹೋಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೋವಿಡ್‌ ಕಾರಣದಿಂದ ಕಚೇರಿ ಅವಧಿಗೆ ಮೊದಲೇ ನಿರ್ಗಮಿಸುತ್ತಿರುವುದು ಜನರ ಸಮಸ್ಯೆಗೆ ತಾತ್ಕಾಲಿಕ ತಡೆ ಬಿದ್ದಿದೆ.

ಬೇಸಿಗೆಯಲ್ಲಿ ಹೆಚ್ಚು ಮದುವೆ, ಮುಂಜಿ ಸೇರಿದಂತೆ ಶುಭ ಕಾರ್ಯಗಳು ನಡೆಯುತ್ತಿರುವುದರಿಂದ ದಿನಸಿ, ಬಟ್ಟೆ, ಬಂಗಾರ, ಮನೆ ಬಳಕೆ ವಸ್ತುಗಳ ಖರೀದಿಗೆ ಜನ ತಂಡೋಪ ತಂಡವಾಗಿ ಮಾರುಕಟ್ಟೆಗೆ ಬರುತ್ತಿರುವುದು ಆತಂಕ ಮೂಡಿಸಿದೆ. ಮದುವೆ ಮುಂದೂಡಲೂ ಆಗದೇ, ಬಂಧುಗಳನ್ನು ಸೇರಿಸುವುದು ಸೇರಿದಂತೆ ಯಾವುದೇ ಸ್ವಯಂ ನಿರ್ಧಾರಗಳನ್ನು ಕೈಗೊಳ್ಳದ ಪರಿಣಾಮ ಬೆಳಿಗ್ಗೆ 6 ರಿಂದ 12 ಗಂಟೆಯಾದರೂ ಜನರು ರಸ್ತೆಯಿಂದ ಕದಲುವುದೇ ಕಡಿಮೆಯಾಗಿದೆ.

ADVERTISEMENT

ಪರಸ್ಪರ ಅಂತರ, ಮಾಸ್ಕ್, ಸ್ಯಾನಿಟೈಸರ್‌ ಎಂದು ಜಾಗೃತಿ, ಧ್ವನಿವರ್ಧಕಗಳು, ಪೊಲೀಸರು, ಸ್ವಯಂ ಸೇವಕರು ಹೇಳುತ್ತಿದ್ದರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ, ನಮಗೆ ರೋಗ ಬರುವುದೇ ಇಲ್ಲ ಎಂದು ನಿರ್ಲಕ್ಷ್ಯದಿಂದ ಮಾರುಕಟ್ಟೆಯಲ್ಲಿ ಠಳಾಯಿಸುತ್ತಾರೆ. ಮಾರಾಟಕ್ಕೆ ಸಮಯ ಸಾಕಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದರೂ, ಸಮಯ ಮೀರಿದ ನಂತರ ವಸ್ತುಗಳ ಖರೀದಿಗೆ ವ್ಯಾಪಾರಿಗಳ ಮನೆಗೆ ಎಡತಾಕುತ್ತಿರುವ ಜನರ ನಡುವೆ ಕರ್ಫ್ಯೂ ಒದ್ದಾಡುತ್ತಿದೆ.

ಪ್ರಮುಖ ರಸ್ತೆ, ಬಜಾರ್‌ ಜನರಿಂದ ತುಂಬಿ ತುಳುಕುತ್ತಿವೆ. ಈ ಅವಧಿಯಲ್ಲಿಯೇ ನುಸುಳುವ ಸೋಂಕು ಬಂದ್‌ ಮಾಡಿದ ನಂತರ ಮನೆಯೊಳಗೆ ಮಾರಿಯಂತೆ ಒಕ್ಕರಿಸಿಕೊಳ್ಳುತ್ತದೆ. ಆರಂಭದಲ್ಲಿ ಎರಡಂಕಿ ದಾಟದ ಎರಡನೇ ಅಲೆ ಈಗ ನಾಲ್ಕು ಅಂಕಿಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 650 ಹಾಸಿಗೆ ಸಾಮರ್ಥ್ಯ ಇದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂಬುವುದು ಕನಸಿನ ಮಾತಾಗಿದೆ. ಮದ್ಯದಂಗಡಿಗಳು ಬೆಳಿಗ್ಗೆಯಿಂದಲೇ ಭರ್ತಿಯಾಗಿರುತ್ತವೆ. 10ರ ನಂತರ ಬ್ಲ್ಯಾಕ್‌ ಮಾರಾಟ ದಂಧೆ ಶುರುವಾಗುತ್ತದೆ. ತಡವಾಗಿ ಎದ್ದರೆ ಎಲ್ಲಿ ಬಂದ್‌ ಆಗುತ್ತವೆಯೋ ಎಂಬ ಭಯದಲ್ಲಿ ವ್ಯಸನಿಗಳು ಮದ್ಯ ಖರೀದಿಗೆ ಮೊದಲ ಆದ್ಯತೆ ನೀಡುತ್ತಾರೆ. ಸಮಯ ಸಿಕ್ಕರೆ ತರಕಾರಿ, ಸೊಪ್ಪು, ಕಿರಾಣಿ ಖರೀದಿಸಿ ಮನೆಗೆ ಹೋಗುತ್ತಾರೆ.

ಕೋವಿಡ್‌ ಪರಿಣಾಮಕಾರಿ ತಡೆಗೆ ಸಂಪೂರ್ಣ ಲಾಕ್‌ಡೌನ್‌ ಆಗುವ ಭಯದಲ್ಲಿ ಬಡವರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ತೀವ್ರ ಆತಂಕಿತರಾಗಿದ್ದಾರೆ. ಅಗ್ರಿ, ಹಾರ್ಟಿ ವಾರ್‌ ರೂಂಗಳಾದರೂ ಕೃಷಿಕರ ಎಷ್ಟು ವಸ್ತುಗಳನ್ನು ಖರೀದಿಸಬಲ್ಲವು ಎಂಬ ಪ್ರಶ್ನೆ ಕೂಡಾ ಎದುರಾಗಿದೆ.

ಗವಿಮಠದಲ್ಲಿ 100 ಹಾಸಿಗೆಯ ಆಸ್ಪತ್ರೆ

ಗವಿಮಠದ ವಸತಿ ನಿಲಯಗಳಲ್ಲಿ ಆಮ್ಲಜನಕ ಸಹಿತ 100 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಲು ಜಿಲ್ಲಾಡಳಿತದ ಸಹಕಾರದೊಂದಿಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಿದ್ಧತೆ ನಡೆಸಿದ್ದು, ಎಲ್ಲ ವೈದ್ಯಕೀಯ ಸೌಕರ್ಯಗಳನ್ನು ಒಂದೆಡೆ ಕಲ್ಪಿಸಲು ಯೋಜನೆ ರೂಪಿಸಿದ್ದಾರೆ.

ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ ನಿತ್ಯ ದಾಸೋಹದ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸ್ವಾಮೀಜಿ ಬಳಿ ಮನವಿ ಮಾಡಿದಾಗ ಅವರು ಸ್ಪಂದಿಸಿ ತಕ್ಷಣ ವಸತಿನಿಲಯಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ.

ಶ್ರೀಗಳ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ಗಳಿಸಿದೆ.

ವಿದ್ಯುತ್‌ ಕಣ್ಣಾಮುಚ್ಚಾಲೆ
ಮಳೆ ಬರಲಿ, ಬಿಡಲಿ ಬೇಸಿಗೆಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು ಜೆಸ್ಕಾಂಗೆ ವಾಡಿಕೆಯಾಗಿದೆ. ಸ್ವಲ್ಪ ಗಾಳಿ, ಗುಡುಗು, ಮಿಂಚು, ಸಿಡಿಲು, ಮಳೆಯಾದರೂ ತಕ್ಷಣ ವಿದ್ಯುತ್‌ ಕಟ್ ಮಾಡುವಲ್ಲಿ ತೋರಿಸುವ ಆಸಕ್ತಿಯನ್ನು ಸಮಸ್ಯೆಬಗೆಹರಿಸುವತ್ತ ಗಮನ ಹರಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಾರುಕಟ್ಟೆ ಪ್ರದೇಶದ ವಿವಿಧ ಬಡಾವಣೆಗಳಲ್ಲಿ ರಾತ್ರಿ ಸೊಳ್ಳೆಗಳ ಕಾಟದಿಂದ ಫ್ಯಾನ್‌ ಹಾಕಿಕೊಂಡು ಮಲಗಬೇಕು ಎಂದರೆ ವಿದ್ಯುತ್‌ ಕಣ್ಣಾಮುಚ್ಚಾಲೆಗೆ ನಿದ್ದೆ ಬಾರದೆ ನರಳಾಡುತ್ತಿರುವ ಪ್ರಸಂಗ ಎದುರಾಗಿದೆ.ಗುರುವಾರ ಕೂಡಾ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಕೈಕೊಟ್ಟ ಪರಿಣಾಮ 20ಕ್ಕೂ ಹೆಚ್ಚು ಜನರು ಜೆಸ್ಕಾಂ ಕಚೇರಿಗೆ ತೆರಳಿ ಅಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದ್ದು, ಸುದ್ದಿಯಾಗಿದೆ.

‘ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ’
ತಾವರಗೇರಾ:
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಷ್ಟಗಿ ತಹಶೀಲ್ದಾರ್‌ ಎಂ. ಸಿದ್ದೇಶ್‌ ಭೇಟಿ ನೀಡಿದರು. ಕೊವೀಡ್ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಆಮ್ಲಜನಕ ಹಾಗೂ ಹಾಸಿಗೆ ಸೇರಿ ಮೂಲ ಸೌಕರ್ಯಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿ,‘ಕೊವೀಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಬೇಕು. ನಿರ್ಲಕ್ಷ್ಯ ವಹಿಸಬಾರದು. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಿ ಕೊಡಬೇಕು. ಆದಷ್ಟು ಕೋವಿಡ್ ಪ್ರಕರಣಗಳು ಹೆಚ್ಛಾಗದಂತೆ ನಿಗಾ ವಹಿಸಬೇಕು’ ಎಂದು ಅವರು ಹೇಳಿದರು.

ವೈದ್ಯಾಧಿಕಾರಿ ಡಾ.ಕಾವೇರಿ, ಡಾ.ಪ್ರಶಾಂತ ತಾಳಿಕೋಟೆ, ಡಾ.ಕೃತಿಕಾ, ಕಂದಾಯ ಇಲಾಖೆ ಸಿಬ್ಬಂದಿ ಸೂರ್ಯಕಾಂತ ನಾಯಕ, ಪ.ಪಂ ಸಿಬ್ಬಂದಿ ಶ್ಯಾಮೂರ್ತಿ ಕಟ್ಟಿಮನಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.