ಯಲಬುರ್ಗಾ: ‘ದುರಾಸೆ ಮದ್ದಿಲ್ಲದ ರೋಗ. ಇದು ಬಹುತೇಕರಿಗೆ ಅಂಟಿಕೊಂಡ ಪರಿಣಾಮ ದೇಶದಲ್ಲಿ ಅಪ್ರಮಾಣಿಕತೆ, ಭ್ರಷ್ಟಾಚಾರ, ಅಮಾನವೀಯತೆ ತಾಂಡವವಾಡುತ್ತಿದೆ. ಇದು ನಿಯಂತ್ರಣವಾಗದ ಹೊರತು ದೇಶದ ಪ್ರಗತಿ ಪರಿಭಾಷಿಸಲು ಸಾಧ್ಯವಾಗದು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಪಟ್ಟಣದಲ್ಲಿ ಗುರುಬಸಪ್ಪ ಕಳಕಪ್ಪ ಪಲ್ಲೇದ ಅವರ 50ನೇ ವರ್ಷದ ಸ್ಮರಣಾರ್ಥ ನಡೆದ ಸೇವಾ ಸಂಸ್ಥೆ ಉದ್ಘಾಟನೆ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಪಿ.ಪಲ್ಲೇದ ಅವರ ‘ನನ್ನ ಬದುಕಿನ ಪಥ’ ಎಂಬ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲುವಾಸ ಅನುಭವಿಸಿದವರನ್ನ ಮತ್ತು ಭ್ರಷ್ಟಾಚಾರದ ಮೂಲಕ ಸಾಕಷ್ಟು ಹಣಗಳಿಸಿದವರನ್ನ ಹೊತ್ತುಕೊಂಡು ಸಂಭ್ರಮಿಸುವ ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಮಾಣಿಕರು, ನಿಷ್ಠಾವಂತರಿಗೆ ಅಗೌರವ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಮಾಜದಲ್ಲಿ ಮೌಲ್ಯ, ಸಂಸ್ಕಾರ ಹಾಗೂ ಮನುಷ್ಯತ್ವದ ಪರಿಕಲ್ಪನೆಗಳಿಗೆ ಜಾಗವೇ ಇಲ್ಲದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಐವತ್ತರ ದಶಕದಲ್ಲಿ ದೇಶದಲ್ಲಿ ಅತಿ ಹೆಚ್ಚು ಹಗರಣಗಳು ನಡೆದವು. ಸಾವಿರಾರು ಕೋಟಿ ಮೊತ್ತದ ಹಗರಣದಿಂದ ಹಣ ಮತ್ತು ಸಂಪತ್ತು ಒಂದೇ ಕಡೆ ಸೇರಿದರೆ ದೇಶದ ಪ್ರಗತಿಯನ್ನು ಹೇಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ? ಶ್ರೀಮಂತರಾಗುವುದು, ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುವುದು ತಪ್ಪಲ್ಲ. ಆದರೆ, ಇನ್ನೊಬ್ಬರಿಗೆ ತೊಂದರೆ, ಅನ್ಯಾಯ ಮಾಡಿ ವಾಮಮಾರ್ಗದಿಂದ ಪಡೆಯುವುದು ತಪ್ಪು’ ಎಂದರು.
‘ಕ್ರಾಂತಿ, ನ್ಯಾಯಾಂಗದಿಂದಾಗಲಿ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ತೃಪ್ತಿ ಎಂಬ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಗತ್ಯಕ್ಕಿಂತಲೂ ಹೆಚ್ಚಿನದು ಬೇಡ. ಇದ್ದದರಲ್ಲಿಯೇ ಸಂತೃಪ್ತಿ ಹೊಂದುವ ಮನೋಭಾವ ಬೆಳೆಸಿಕೊಳ್ಳುತ್ತ ಹೋದರೆ ಸಹಜವಾಗಿ ಸಮುದಾಯದಲ್ಲಿ ಬದಲಾವಣೆ ಕಂಡುಬರುತ್ತದೆ. ಈ ಬದಲಾವಣೆ ಪ್ರತಿಯೊಂದು ಕ್ಷೇತ್ರದ ಮೇಲೂ ಪ್ರಭಾವ ಬೀರಿ ಸುಧಾರಣೆಗೆ ದಾರಿ ಮಾಡಿಕೊಡುತ್ತದೆ’ ಎಂದು ಹೇಳಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್.ಮಿಟ್ಟಲಕೋಡ ಮಾತನಾಡಿ,‘ಈ ಹಿಂದೆ ಯಾವುದೇ ರೀತಿಯ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಮನಃಸಾಕ್ಷಿ ಮತ್ತು ಆತ್ಮಸಾಕ್ಷಿಯೇ ಬಹುದೊಡ್ಡ ಕ್ಯಾಮೆರಾ ಆಗಿತ್ತು. ಮನಕ್ಕೆ ಅಂಜಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಈಗ ಪ್ರತಿಯೊಂದು ಕಚೇರಿ, ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಾಕ್ಷಿಗಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದರು.
ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿ,‘ಯಾಂತ್ರಿಕ ಬದುಕಿನಲ್ಲಿ ಕುಟುಂಬಗಳ ಮಹತ್ವ ಮತ್ತು ಸಂಬಂಧಗಳ ಮೌಲ್ಯಗಳು ಕುಸಿಯುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ಸಂಬಂಧಗಳ ಹೆಸರೂ ಗೊತ್ತಿಲ್ಲದ ಸನ್ನಿವೇಶಗಳು ನಿರ್ಮಾಣಗೊಂಡಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ರೋಣದ ಗುಲಗಂಜಿಮಠದ ಗುರುಪಾದ ದೇವರು, ನಿವೃತ್ತ ನ್ಯಾಯಾಧೀಶ ಕಿಣಕೇರಿ ಮಾತನಾಡಿದರು.
ಡಾ.ಜಿ.ಬಿ.ಪಾಟೀಲ ಸ್ವಾಗತಿಸಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ.ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ನ್ಯಾಯಾಧೀಶ ಮಹಾಂತೇಶ ಶಿಗ್ಲಿ ನಿರೂಪಿಸಿ, ವಂದಿಸಿದರು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಇದ್ದರು. ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.