ADVERTISEMENT

ಶಾಲಾ ಆರಂಭೋತ್ಸವ: ಕೋವಿಡ್- ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

ಕ್ರಿಯಾ ಯೋಜನೆ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 5:50 IST
Last Updated 23 ಜೂನ್ 2021, 5:50 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ಮಾತನಾಡಿದರು   

ಕೊಪ್ಪಳ: ‘ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿರುವ ಪೋಷಕರಿಗೆ ಮಕ್ಕಳ ಸುರಕ್ಷತೆ ಬಗ್ಗೆ ಮನವರಿಕೆ ಮಾಡಿ, ಸೂಕ್ತ ವ್ಯವಸ್ಥೆಗಳೊಂದಿಗೆ ತರಗತಿ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2021-22ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವ ಹಾಗೂ ಪರ್ಯಾಯ ಕ್ರಿಯಾ ಯೋಜನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತೊಂದರೆ ಮಾಡುತ್ತದೆ ಎಂಬ ಭೀತಿ ಮಕ್ಕಳ ಪೋಷಕರಲ್ಲಿದೆ. ಇದರಿಂದ ಶೈಕ್ಷಣಿಕ ವರ್ಷ ಆರಂಭವಾದರೂ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಶಾಲೆಯಲ್ಲಿ ಮಕ್ಕಳ ನಡುವೆಪರಸ್ಪರ ಅಂತರ ಇರುವಂತೆ ನೋಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಸೇರಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ADVERTISEMENT

ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಪೋಷಕರಿಗೆ ಮನವರಿಕೆ ಮಾಡಿಸಬೇಕು. ಶಿಕ್ಷಕರು, ತಮ್ಮ ಶಾಲೆಯ ಮಕ್ಕಳ ಪೋಷಕರ ಬಳಿ ಖುದ್ದಾಗಿ ಹೋಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಬೇಕು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿ ಎಂದು ಅವರು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ಮನೆ, ಮನೆ ಸಮೀಕ್ಷೆ ನಡೆಸಿ ಎಷ್ಟು ಜನ ಮಕ್ಕಳು ಮೊಬೈಲ್ ಸೌಲಭ್ಯ ಹೊಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ. ಅಂಥವರ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ ಆನ್‌ಲೈನ್ ತರಗತಿಗೆ ಹಾಜರಾಗಲು ತಿಳಿಸಿ. ಈಗಾಗಲೇ ರಾಜ್ಯ ಸರ್ಕಾರ ಈ ಬಗ್ಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೊಬೈಲ್ ಇಲ್ಲದಿದ್ದಲ್ಲಿ ದೂರದರ್ಶನ, ರೇಡಿಯೋ ಪಾಠಗಳನ್ನು ಕೇಳುವಂತೆ ಸೂಚಿಸಿದೆ. ತರಗತಿಗೆ ನೇರವಾಗಿ ಹಾಜರಾಗಲು ಆಗದಿದ್ದವರು ದೂರದರ್ಶನ ಹಾಗೂ ರೇಡಿಯೋ ಪಾಠಗಳನ್ನು ಕೇಳಬಹುದು ಎಂದು ಹೇಳಿದರು.

ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಅನುದಾನದ ಸದುಪಯೋಗ ಮಾಡಬೇಕು.ಈಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು.ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಆರಂಭವಾಗಿದ್ದು, ಜುಲೈ 1 ರಿಂದ ತರಗತಿ ಆರಂಭವಾಗುತ್ತವೆ. ಪೋಷಕರು ಯಾವುದೇ ವದಂತಿಗೆ ಕಿವಿಗೊಡದೆ ಮತ್ತು ಭೀತಿಗೆ ಒಳಗಾಗದೆ ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು.

ಜಿ.ಪಂಸಿಇಒ ರಘುನಂದನ್ ಮೂರ್ತಿ ಮಾತನಾಡಿದರು. ಡಿಡಿಪಿಐದೊಡ್ಡಬಸಪ್ಪ ನೀರಲಕೇರಿ ಮಾತನಾಡಿ,‘ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜುಲೈ 1 ರಿಂದ ಭೌತಿಕ ತರಗತಿ ಆರಂಭವಾಗಲಿದ್ದು, ಮಕ್ಕಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್.ಡಿ.ಎಂ.ಸಿ ಸದಸ್ಯರು, ಜನಪ್ರತಿನಿಧಿಗಳು, ಉದ್ಯಮಿಗಳು ಮಕ್ಕಳಿಗೆ ಮಾಸ್ಕ್‌ ಒದಗಿಸಲು ಶಿಕ್ಷಣ ಇಲಾಖೆಯೊಡನೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಮುನಿರಾಬಾದ್ ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.