ADVERTISEMENT

ಮೂರನೇ ಅಲೆ: ಎಚ್ಚರ ವಹಿಸಲು ಸೂಚನೆ

ಕೋವಿಡ್ ನಿರ್ವಹಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ, ಅಧಿಕಾರಿಗಳು, ಶಾಸಕರೊಂದಿಗೆ ಆನ್‌ಲೈನ್‌ ಸಭೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 2:43 IST
Last Updated 1 ಜೂನ್ 2021, 2:43 IST
ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಅವರೊಂದಿಗೆ ಆನ್‌ಲೈನ್‌ ಸಭೆ ನಡೆಸಿದರು
ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಅವರೊಂದಿಗೆ ಆನ್‌ಲೈನ್‌ ಸಭೆ ನಡೆಸಿದರು   

ಕೊಪ್ಪಳ: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೋಮವಾರ ಆನ್‌ಲೈನ್‌ನಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲೆಯ ಸ್ಥಿತಿಗತಿ ಹಾಗೂ ಆಮ್ಲಜನಕ, ವೆಂಟಿಲೇಟರ್ ಹಾಗೂ ಕೋವಿಡ್ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು.

‘ಕೋವಿಡ್ ಮೂರನೇ ಅಲೆ ಹರಡುತ್ತಿದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಿದ್ದು, ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಮತ್ತು ಕೋವಿಡ್ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಈ ಕೂಡಲೇ ಅವರಿಗೆ ನಿರ್ದೇಶನ ನೀಡಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ‘ಜಿಲ್ಲೆಯಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಮಾತನಾಡಿ,‘ಜಿಲ್ಲೆಯಲ್ಲಿ ಡಿಎಪಿ ಗೊಬ್ಬರದ ಕೊರತೆ ಇದೆ. ರೈತರಿಂದ ನಮಗೆ ಹಲವಾರು ಕರೆಗಳು ಬರುತ್ತಿವೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆದಷ್ಟು ಬೇಗನೆ ರೈತರಿಗೆ ಗೊಬ್ಬರ ಒದಗಿಸಬೇಕು’ ಎಂದು ಹೇಳಿದರು.

ಸಚಿವರು ಸಭೆಯಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಗೊಬ್ಬರದ ಸಮಸ್ಯೆಯನ್ನು ಶ್ರೀಘ್ರವಾಗಿ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ,‘ಜಿಲ್ಲೆಯಲ್ಲಿ 984 ಜನ ಕೋವಿಡ್ ಆರೈಕೆ ಕೇಂದ್ರದಲ್ಲಿದ್ದಾರೆ. 922 ಜನರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. 1100 ಜನರನ್ನು ಕೋವಿಡ್ ಆರೈಕೆ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಜಿಲ್ಲೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಬ್ಲಾಕ್ ಫಂಗಸ್ 7 ಪ್ರಕರಣಗಳಲ್ಲಿ 2 ಸಾವುಗಳಾಗಿವೆ. 5 ಪ್ರಕರಣಗಳು ಸಕ್ರಿಯವಾಗಿದ್ದು, ಈ ಕುರಿತು ಮುಂಜಾಗ್ರತೆ ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಇದಕ್ಕೆ ಸಚಿವರು ‘ಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು’ ಎಂದರು.

ಗಂಗಾವತಿ ತಹಶೀಲ್ದಾರ್ ಎಂ.ನಾಗರಾಜ್‌ ಮಾತನಾಡಿ,‘ಪಿ.ಎಚ್.ಸಿಮತ್ತು ಸಿ.ಎಚ್.ಸಿ ಗಳಲ್ಲಿಯೂ ಹೆಚ್ಚಿನ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಕೋವಿಡ್ ನೋಡಲ್ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಕೋವಿಡ್ ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವೇಳೆ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.