ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ

ಸಿದ್ದನಗೌಡ ಪಾಟೀಲ
Published 15 ಜನವರಿ 2022, 8:36 IST
Last Updated 15 ಜನವರಿ 2022, 8:36 IST
ಡಾ.ಅಲಕಾನಂದ 
ಡಾ.ಅಲಕಾನಂದ    

ಕೊಪ್ಪಳ: ಕಳೆದ 6 ತಿಂಗಳಿಂದ ಶೂನ್ಯ ವಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.

ಆರೋಗ್ಯ ಇಲಾಖೆ ಮತ್ತು ಕಾರ್ಯಕರ್ತರು ಸತತ ಪರಿಶ್ರಮದ ಮೂಲಕ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಹಾಕಲಾಗಿದ್ದು, ಈಗ 4 ಸಾವಿರ ಜನರಿಗೆ ಬೂಸ್ಟರ್ ಡೋಸ್‌ ಲಸಿಕೆ ಹಾಕಲಾಗಿದೆ.

ಶುಕ್ರವಾರ ಒಂದೇ ದಿನ49 ಸೋಂಕಿತರು ಕಂಡು ಬಂದಿದ್ದು, 54 ಜನ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ದಿನದ ಅಂಕಿ-ಅಂಶದ ಪ್ರಕಾರ ಗಂಗಾವತಿ-12, ಕೊಪ್ಪಳ-22, ಕುಷ್ಟಗಿ-4, ಯಲಬುರ್ಗಾ-17 ಪ್ರಕರಣ ಪತ್ತೆಯಾಗಿವೆ. ಮೊದಲ ಮತ್ತು ಎರಡನೇ ಅಲೆ ಹಾಗೂ ಓಮೈಕ್ರಾನ್‌ ಭೀತಿಯ ಮಧ್ಯೆ 35,375 ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೂ 528 ಜನರು ಮರಣ ಹೊಂದಿದ್ದಾರೆ.

ADVERTISEMENT

ಹೆಚ್ಚಿದ ನೆಗಡಿ, ಜ್ವರ, ಕೆಮ್ಮ: ಜಿಲ್ಲೆಯಾದ್ಯಂತ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ವಿವಿಧ ಕಾಯಿಲೆಗಳು ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಖಾಸಗಿ, ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.

ಜಿಲ್ಲಾ ಸರ್ಕಾರ ಆಸ್ಪತ್ರೆಯಲ್ಲಿ ಒಂದೇ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಜನ ವಿವಿಧ ರೋಗ ಸಂಬಂಧಿ ಚಿಕಿತ್ಸೆಗೆ ಬಂದಿದ್ದರು. 500 ಜನ ದಾಖಲಾಗಿದ್ದಾರೆ. ಕೋವಿಡ್‌-19 ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದರೆ ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಕೆಲವರು ಅನಾರೋಗ್ಯವಿದ್ದರೂ ಕೋವಿಡ್‌ ದೃಢವಾದರೆ ಹೇಗೆ ಎಂಬ ಭಯದಿಂದ ಪರೀಕ್ಷೆಗೆ ಹಿಂದೇಟು ಹಾಕಿದ್ದಾರೆ.

ಕುಕನೂರು ತಾಲ್ಲೂಕು ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಜ್ವರ, ಕೆಮ್ಮು, ನೆಗಡಿ ಬಾಧೆ ಹೆಚ್ಚಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸತತ ನಿಗಾ ವಹಿಸಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯ, ಸಾಮಗ್ರಿಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಓಮೈಕ್ರಾನ್‌ ಸೋಂಕು ಹರಡದಂತೆ ವಿವಿಧ ಕಠಿಣ ಕ್ರಮ ಜರುಗಿ ಸಬೇಕು ಎಂದು ಸೂಚನೆ ನೀಡಿದ್ದಾರೆ.

ವಲಸೆ ಹೋಗುವವರು ಸಂಖ್ಯೆ ಈ ಸಾರಿ ಕಡಿಮೆಯಾಗಿದ್ದು, ವಿವಿಧೆಡೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪರ ಊರಿಗೆ ಹೋಗಲು ಜನರು ಭಯಪಡುತ್ತಿದ್ದು, ಸೋಂಕು ವ್ಯಾಪಿಸುವ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ವಿವಿಧೆಡೆ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಜಾತ್ರೆ, ಉತ್ಸವ, ಸಂತೆ, ಜಾನುವಾರು ಸಂತೆಗಳನ್ನು ರದ್ದು ಮಾಡಲಾಗಿದೆ.

ಲಕ್ಷಾಂತರ ಜನ ಸೇರುವ ಗವಿಮಠದ ಜಾತ್ರೆ, ಭಾರತ ಹುಣ್ಣಿಮೆ ಉತ್ಸವ ನಡೆಯುವ ಹುಲಿಗಿಯ ಹುಲಿಗೆಮ್ಮ ದೇವಸ್ಥಾನವನ್ನು ಬಂದ್‌ ಮಾಡಲಾಗಿದೆ. ಸಂಕ್ರಾಂತಿಯಂದು ತುಂಗಭದ್ರಾ ನದಿ ತೀರದಲ್ಲಿ ನಡೆಯುವ ಪುಣ್ಯಸ್ನಾನದಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಿತ್ತು. ಅಂಜನಾದ್ರಿ ಆಂಜನೇಯನ ದರ್ಶನ ಕೂಡಾ ಬಂದ್‌ ಮಾಡಲಾಗಿದೆ.

2 ಡೋಸ್‌ ಲಸಿಕೆ ಹಾಕಿಸಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೇ 10ರಷ್ಟು ಜನ ಇನ್ನೂ ಲಸಿಕೆ ಪಡೆಯುತ್ತಿಲ್ಲ.

*

ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸತತವಾಗಿ ನಡೆದಿದೆ. ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಔಷಧ ಸೇರಿದಂತೆ ಯಾವುದೇ ಕೊರತೆ ಇಲ್ಲ

-ಡಾ.ಅಲಕಾನಂದ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.