ADVERTISEMENT

ಮಕ್ಕಳು ಭಾಗಿ: ಕೋವಿಡ್‌ ನಿಯಮ ಉಲ್ಲಂಘನೆ

ಮಾಸ್ಕ್‌ ಮರೆತ ವೇದಿಕೆಯಲ್ಲಿನ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 11:19 IST
Last Updated 26 ಜನವರಿ 2022, 11:19 IST
ಕುಷ್ಟಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ಗುಂಪುಗೂಡಿರುವುದು
ಕುಷ್ಟಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ಗುಂಪುಗೂಡಿರುವುದು   

ಕುಷ್ಟಗಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ನೂರಾರು ಮಕ್ಕಳನ್ನು ಒಂದೇ ಕಡೆ ಸೇರಿಸುವ ಮೂಲಕ ಅಧಿಕಾರಿಗಳೇ ಕೋವಿಡ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಕೋವಿಡ್‌ ಸೋಂಕು ಹೆಚ್ಚುತ್ತಿರುವುದು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 1-9ನೇ ತರಗತಿ ಮಕ್ಕಳು ಭಾಗಿಯಾಗುವುದು ಬೇಡ ಎಂದು ಪೂರ್ವಸಿದ್ಧತೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಪಟ್ಟಣದ ಅನೇಕ ಶಾಲೆಗಳ ಮಕ್ಕಳು ಒಂದೇ ಕಡೆ ಜಮಾಯಿಸಿದ್ದರು. ಬೆರಳೆಣಿಕೆ ಮಕ್ಕಳು ಮಾತ್ರ ಮಾಸ್ಕ್‌ ಹಾಕಿಕೊಂಡಿದ್ದು ಕಂಡುಬಂದಿತು. ಅವರಲ್ಲಿನ ಅನೇಕ ಮಕ್ಕಳು ಶೀತ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವುದು ತಿಳಿಯಿತು.

ಅದೇ ರೀತಿ ವೇದಿಕೆಯಲ್ಲಿದ್ದ ಅಧಿಕಾರಿಗಳ ಮಧ್ಯೆ ವ್ಯಕ್ತಿಗತ ಅಂತರ ಮಾಯವಾಗಿತ್ತು. ಶಾಸಕರ ಜತೆಯಲ್ಲಿಯೇ ವೇದಿಕೆ ಹಂಚಿಕೊಂಡಿದ್ದ ಬಹುತೇಕ ಅಧಿಕಾರಿಗಳು, ಸಿಬ್ಬಂದಿ ಮಾಸ್ಕ್‌ ಧರಿಸಿರಲಿಲ್ಲ. ಫೋಟೊದಲ್ಲಿ ಮುಖ ಬರುವುದಿಲ್ಲ ಎಂಬ ಕಾರಣಕ್ಕೆ ಕೆಲವರ ಮುಖದಲ್ಲಿ ಕಾಟಾಚಾರಕ್ಕೆ ಮಾಸ್ಕ್‌ ಇದ್ದವು. ವೇದಿಕೆಯಲ್ಲಿ ಅಧಿಕಾರಿಗಳು ಗುಂಪಾಗಿ ಕುಳಿತಿದ್ದರು. ಜನರಿಗೆ ತಿಳಿವಳಿಕೆ ನೀಡಬೇಕಾದವರೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎಂದು ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.