ADVERTISEMENT

ಕೊಪ್ಪಳ: ಗವಿಮಠದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಮ್ಲಜನಕ ಸೌಲಭ್ಯವಿರುವ ಆಸ್ಪತ್ರೆ

ಕೊಪ್ಪಳದ ಗವಿಮಠದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಮ್ಲಜನಕ ಸೌಲಭ್ಯ ಹೊಂದಿದ ಆಸ್ಪತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಮೇ 2021, 8:44 IST
Last Updated 13 ಮೇ 2021, 8:44 IST
ಕೊಪ್ಪಳದ ಗವಿಮಠದ ವೃದ್ಧಾಶ್ರಮದ ಆವರಣದಲ್ಲಿ ಆರಂಭವಾದ ಕೋವಿಡ್‌ ಆಸ್ಪತ್ರೆಯನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ್.ಎಂ.ಜಿ ಉದ್ಘಾಟಿಸಿದರು
ಕೊಪ್ಪಳದ ಗವಿಮಠದ ವೃದ್ಧಾಶ್ರಮದ ಆವರಣದಲ್ಲಿ ಆರಂಭವಾದ ಕೋವಿಡ್‌ ಆಸ್ಪತ್ರೆಯನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ್.ಎಂ.ಜಿ ಉದ್ಘಾಟಿಸಿದರು   

ಕೊಪ್ಪಳ: ‘ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕಿತ್ಸೆ ನೀಡಲು ಹಾಗೂ ಜನರ ರಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಆಸ್ಪತ್ರೆ ಆರಂಭಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಮಠದ ಸಹಕಾರದಿಂದ ಸುಸಜ್ಜಿತ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲೆಯ ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದಲ್ಲಿ ಶ್ರೀ ಗವಿಮಠದ ಯಾತ್ರಿ ನಿವಾಸದಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಜಿಲ್ಲೆಯ ಜನರನ್ನು ಕೋವಿಡ್‌ನಿಂದ ಪಾರುಮಾಡಲು ಈ ಆಸ್ಪತ್ರೆ ಸಹಕಾರಿಯಾಗಲಿದೆ. ಗವಿಮಠದ ಶ್ರೀಗಳ ದೂರದೃಷ್ಟಿ, ಸಾಮಾಜಿಕ ಕಳಕಳಿ ರಾಜ್ಯಕ್ಕೆ ಮಾದರಿ ಎಂದು ಹೇಳಿದರು.

ADVERTISEMENT

ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ್ ಆಸ್ಪತ್ರೆ ಉದ್ಘಾಟಿಸಿದರು.

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ,‘ಮೂರು ದಿನಗಳ ಕಡಿಮೆ ಸಮಯದಲ್ಲಿ ಗವಿಮಠ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಸುಸಜ್ಜಿತ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಕೊಠಡಿಗೆ ಪ್ರತ್ಯೇಕ ಶೌಚಾಲಯ, ವೈದ್ಯರು ಹಾಗೂ ಸಿಬ್ಬಂದಿ ವಸತಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾಗುವ ಕೊರೊನಾ ಸೋಂಕಿತರಿಗೆ ದೈಹಿಕ ಆರೋಗ್ಯ ಹಾಗೂ ಮನೋಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಹೆಚ್ಚಿನ ಬೆಡ್‌ಗಳ ಅಗತ್ಯ ಬಿದ್ದಲ್ಲಿ ಮಠದ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಸಂಸದ ಕರಡಿ ಸಂಗಣ್ಣ ಮತನಾಡಿ,‘ಶ್ರೀಗಳ ಸೇವೆಸ್ಮರಣೀಯ. ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಈ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಔಷಧಿ, ಆಹಾರ ವ್ಯವಸ್ಥೆ ಮಾಡಬೇಕು.ಆಮ್ಲಜನಕ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕರಾದ ಅಮರೆಗೌಡ ಪಾಟೀಲ ಬಯ್ಯಾಪುರ, ಪರಣ್ಣ ಮುನವಳ್ಳಿ,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕೋವ್ಯಾಕ್ಸಿನ್‌ ಖಾಲಿ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದೆ.

ಎರಡನೇ ಡೋಸ್ ಪಡೆಯಲು ಜನರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.

ಈ ಎಲ್ಲ ಜಿಲ್ಲೆಗಳಲ್ಲಿಕೋವಿಶೀಲ್ಡ್ ಲಸಿಕೆ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ.

‘ಜಿಲ್ಲೆಗೆ ಹಂಚಿಕೆಯಾಗಿದ್ದ ಕೋವ್ಯಾಕ್ಸಿನ್ ಖಾಲಿಯಾಗಿದ್ದು, ಇನ್ನೂ ಎರಡು–ಮೂರು ದಿನಗಳಲ್ಲಿ ಬರುವ ನಿರೀಕ್ಷೆ ಇದೆ’ ಎಂದು ಕಲಬುರ್ಗಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ ತಿಳಿಸಿದರು.

‘ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದ್ದು, ಕೋವಿಶೀಲ್ಡ್ ಲಸಿಕೆ ಲಭ್ಯವಿದೆ’ ಎಂದು ಯಾದಗಿರಿ, ಕೊಪ್ಪಳ ಮತ್ತು ಬೀದರ್‌ ಜಿಲ್ಲೆಗಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಸರ್ಕಾರಿ ಆಸ್ಪತ್ರೆಗೆ 30 ಬೆಡ್‌, ಕಾಟ್‌ ದೇಣಿಗೆ

ಕುಕನೂರು: ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಉದ್ಯಮಿ ವಿರುಪಾಕ್ಷಪ್ಪ ರಾಯರಡ್ಡಿ ಅವರು 30 ಬೆಡ್ ಹಾಗೂ ಕಾಟ್‌ಗಳನ್ನು ನೀಡಿದರು.

ಕಾಂಗ್ರೆಸ್ ಮುಖಂಡ ಸತ್ಯನಾರಾಯಣಪ್ಪ ಹರಪನಹಳ್ಳಿ ಮಾತನಾಡಿ,‘ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ₹10 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಿಸಿದ್ದರು. ಎರಡು ವರ್ಷಗಳಾದರೂ ಆರಂಭವಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾರಂಭಿಸಬೇಕು’ ಎಂದು ಮನವಿ ಮಾಡಿದರು.

ಆಸ್ಪತ್ರೆಗೆ ಉದ್ಯಮಿ ವಿರೂಪಾಕ್ಷಪ್ಪ ರಾಯರಡ್ಡಿ ಅವರು ತಮ್ಮ ಸ್ವಂತ ಹಣದಲ್ಲಿ 30 ಬೆಡ್ ಮತ್ತು ಕಾಟ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಉದ್ಯಮಿ ವಿರುಪಾಕ್ಷಪ್ಪ ರಾಯರಡ್ಡಿ ಮಾತನಾಡಿ,‘ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಹಗಲಿರಳು ಶ್ರಮಿಸಿದ್ದಾರೆ. ಕಳೆದ ಸಾಲಿನಲ್ಲಿ ಕೊರೊನಾದಿಂದ ಆರ್ಥಿಕವಾಗಿ ತೊಂದರೆಯಲ್ಲಿದ್ದವರಿಗೆ ಆಹಾರ ಧಾನ್ಯದ ಕಿಟ್‌, ಹಣ್ಣು, ತರಕಾರಿ, ಸ್ಯಾನಿಟೈಸರ್‌ ಹಾಗೂ ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಅವರ ಪ್ರೇರಣೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಈ ಕಾರ್ಯ ಮಾಡಿದ್ದೇನೆ’ ಎಂದು ಹೇಳಿದರು.

ವೈದ್ಯಾಧಿಕಾರಿ ಸೀಮಾ ಮಾಬಳೆ, ಯಲ್ಲಪ್ಪ ಮೇಟಿ, ಈರಣ್ಣ ಹಳ್ಳಿಕೇರಿ, ರೇಹಮಾನಸಾಬ ಮಕ್ಕಪ್ಪನವರ್, ಸಂಗಮೇಶ ಗುತ್ತಿ ಹಾಗೂ ಮಂಜುನಾಥ ಯಡಿಯಾಪೂರ ಇದ್ದರು.

ಮದುವೆ: ನಿಯಮ ಉಲ್ಲಂಘಿಸಿದರೆ ಪ್ರಕರಣ

ಕೊಪ್ಪಳ: ‘ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘನೆಯಾದರೆ ಸಂಬಂಧಿಸಿದವರ ವಿರುದ್ದ ದೂರು ದಾಖಲಿಸಲಾಗುವುದು’ ಎಂದು ತಹಶೀಲ್ದಾರ್ ಅಮರೇಶ ಬಿರಾದಾರ ತಿಳಿಸಿದ್ದಾರೆ.

ಸರ್ಕಾರ ಮೇ 10 ರಿಂದ 24 ರವರೆಗೆ ರಾಜ್ಯದಾದ್ಯಂತ ಲಾಕ್‌ಡೌನ್ ವಿಧಿಸಿ ಆದೇಶಿಸಿದೆ. ಸರ್ಕಾರದ ಸುತ್ತೋಲೆಯನ್ವಯ ಮದುವೆ ಸಮಾರಂಭಕ್ಕೆ ಒಟ್ಟು 40 ಜನರು ಮೀರದಂತೆ ನಿರ್ಬಂಧಿಸಿ ಅನುಮತಿ ನೀಡಲು ಆದೇಶಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ತಾಲ್ಲೂಕಿನಾದ್ಯಾಂತ ಜರುಗುವ ಮದುವೆ ಸಮಾರಂಭಗಳಿಗೆ ಆಯಾ ತಹಶೀಲ್ದಾರರಿಗೆ ಅನುಮತಿ ಪತ್ರ ನೀಡುವಂತೆ ಸೂಚಿಸಿರುತ್ತಾರೆ.

ಅದರಂತೆ ತಾಲ್ಲೂಕಿನಾದ್ಯಂತ ಮೇ 13 ಹಾಗೂ 14 ರಂದು ಸುಮಾರು 90 ಮದುವೆ ಸಮಾರಂಭಗಳಿಗೆ ಈ ಕಾರ್ಯಾಲಯದಿಂದ ಅನುಮತಿ ಪತ್ರ ಈಗಾಗಲೇ ನೀಡಲಾಗಿರುತ್ತದೆ. ಈ ಕುರಿತು ಸರ್ಕಾರದ ನಿರ್ದೇಶನದಂತೆ ತಾಲ್ಲೂಕು ಆಡಳಿತದಿಂದ ಈಗಾಗಲೇ ತಾಲ್ಲೂಕು ನೋಡಲ್ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಈ ನಿಯೋಜಿತ ತಂಡಗಳು ನಿಗಾ ವಹಿಸಲಿವೆ.

ಹಾಸಿಗೆ ಸಿಗದೆ ಸಾವು

ಗಂಗಾವತಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಹಾಸಿಗೆ ಸಿಗದೆ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದ ನಿವಾಸಿ ಸಿದ್ದಪ್ಪ (50) ಮೃತ ವ್ಯಕ್ತಿ. ಕೊರೊನಾ ಸೋಂಕು ತಗುಲಿದ ಕಾರಣ ಅವರು ನಗರದ ಹಲವು ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದ್ದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.