ADVERTISEMENT

ಬಿಎಸ್‌ವೈ ಬಗ್ಗೆ ಮಾತನಾಡಿದರೆ ನಾವು ಸುಟ್ಟು ಹೋಗುತ್ತೇವೆ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:11 IST
Last Updated 30 ಜೂನ್ 2021, 21:11 IST
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತಕ್ಕೆ ಬುಧವಾರ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಆಂಜನೇಯನ ದರ್ಶನ ಪಡೆದರು. ಕೆಎಸ್‌ಟಿಡಿಸಿ ಅಧ್ಯಕ್ಷೆ ಶ್ರುತಿ ಇದ್ದರು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತಕ್ಕೆ ಬುಧವಾರ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಆಂಜನೇಯನ ದರ್ಶನ ಪಡೆದರು. ಕೆಎಸ್‌ಟಿಡಿಸಿ ಅಧ್ಯಕ್ಷೆ ಶ್ರುತಿ ಇದ್ದರು   

ಕೊಪ್ಪಳ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾಯಿಸಲು ನಾವು ದೆಹಲಿಗೆ ಹೋಗುತ್ತಿಲ್ಲ. ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ಹೋಗುತ್ತೇವೆ. ನನ್ನನ್ನು ಬಿಎಸ್‌ವೈ ವಿರೋಧಿ ಎಂಬಂತೆ ಬಿಂಬಿಸಬೇಡಿ.ಅವರ ಬಗ್ಗೆ ಮಾತನಾಡಿದರೆ ನಾವು ಸುಟ್ಟು ಹೋಗುತ್ತೇವೆ’ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ವೈಯಕ್ತಿಕ ಸಮಸ್ಯೆಗಳನ್ನು ವರಿಷ್ಠರ ಮಂದೆ ಹೇಳಿಕೊಂಡಿದ್ದೇನೆ. ಇದಕ್ಕೆ ಪರೀಕ್ಷೆ ಬರೆದಿದ್ದು ಎಂದು ಹೇಳಿದ್ದು,ಫಲಿತಾಂಶಕ್ಕೆ ಕಾಯುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಆಂಜನೇಯನ ಜನ್ಮಸ್ಥಳದ ವಿವಾದವನ್ನು ತಿರುಪತಿ ದೇವಸ್ಥಾನ ಮಂಡಳಿ ಅನಗತ್ಯವಾಗಿ ಬೆಳೆಸಬಾರದು. ಹನುಮಂತ ಜನಿಸಿದ ನಾಡು ಎಂದು ಸಾವಿರಾರು ವರ್ಷಗಳಿಂದ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ದೇಶದಲ್ಲಿಯೇ ಅತ್ಯುತ್ತಮ ಪ್ರವಾಸಿ ಕ್ಷೇತ್ರವನ್ನಾಗಿ ರೂಪಿಸಲಾಗುತ್ತದೆ’ ಎಂದರು.

ADVERTISEMENT

ಅಂತರ ಕಾಯ್ದುಕೊಂಡ ಮುಖಂಡರು: ಸಚಿವರ ಸ್ವಾಗತಕ್ಕೆ ಬಿಜೆಪಿಯ ಯಾವುದೇ ಮುಖಂಡರು ಬಂದಿರಲಿಲ್ಲ. ದರ್ಶನ ಪಡೆದು ಪರ್ವತದಿಂದ ಕೆಳಗೆ ಇಳಿದ ನಂತರ ಶಾಸಕ ಪರಣ್ಣ ಮುನವಳ್ಳಿ ಅವರು ಅಂಜನಾದ್ರಿ ಅಭಿವೃದ್ಧಿಗೆ ಮನವಿ ಸಲ್ಲಿಸಿ ಕೆಲಹೊತ್ತು ಚರ್ಚಿಸಿ ತೆರಳಿದರು. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಇದ್ದರು.

ಮಾರ್ಗಸೂಚಿಯ ಉಲ್ಲಂಘನೆ ಆರೋಪ
ಕೊರೊನಾ ಹಾವಳಿ ಕಾರಣಕ್ಕಾಗಿ ದೇವಸ್ಥಾನಗಳಲ್ಲಿ ದರ್ಶನಕ್ಕೆ ರಾಜ್ಯ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಸಚಿವರು ಅಂಜನಾದ್ರಿಯಲ್ಲಿ ಆಂಜನೇಯ ಗುಡಿಯಲ್ಲಿ ದರ್ಶನ ಪಡೆದು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

'ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗೆ ಸಚಿವರು ಬಂದಿದ್ದರು. ಈಗಾಗಲೇ ಮೂರು ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳ ದರ್ಶನ ಪಡೆದಿದ್ದಾರೆ. ಇದು ಮಾರ್ಗಸೂಚಿಯ ಉಲ್ಲಂಘನೆ ಆಗುವುದಿಲ್ಲ' ಎಂದು ಅಂಜನಾದ್ರಿ ದೇವಸ್ಥಾನದ ವಿಶೇಷ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.