ADVERTISEMENT

ಗಂಗಾವತಿ | ‘ದೇಶದ‌ ಬಡಜನತೆಗೆ ದೊರೆತಿಲ್ಲ ಸ್ವಾತಂತ್ರ್ಯ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:54 IST
Last Updated 6 ಡಿಸೆಂಬರ್ 2025, 6:54 IST
ಗಂಗಾವತಿ ನಗರದ ಡಾ.ಬಾಬು ಜನಜೀವನರಾಮ್‌ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಜಾಥಾ ಅಂಗವಾಗಿ ಬಹಿರಂಗ ಸಭೆ ನಡೆಸಲಾಯಿತು
ಗಂಗಾವತಿ ನಗರದ ಡಾ.ಬಾಬು ಜನಜೀವನರಾಮ್‌ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಜಾಥಾ ಅಂಗವಾಗಿ ಬಹಿರಂಗ ಸಭೆ ನಡೆಸಲಾಯಿತು   

ಗಂಗಾವತಿ: ‘ದೇಶದಲ್ಲಿನ ಕೆಲ ರಾಜಕೀಯ ಪಕ್ಷಗಳ ಮತ್ತು ಬಂಡವಾಳ ಶಾಹಿಗಳ ಆಡಳಿತದಿಂದ ಬಡ ಜನರ ಬದುಕು ದುಸ್ತರವಾಗಿದೆ. ಜನರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಜನರು ಎಚ್ಚೆತ್ತು ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕಿದೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.

ನಗರದ ಡಾ.ಬಾಬು ಜನಜೀವನರಾಮ್‌ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಜಾಥಾ ಅಂಗವಾಗಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದುಡಿಯುವ ವರ್ಗದ ಪರ, ಜಮೀನ್ದಾರಿ, ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಲು ಹುಟ್ಟಿಕೊಂಡಿದ್ದು ಭಾರತ ಕಮ್ಯುನಿಸ್ಟ್ ಪಕ್ಷ. ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚ್ ಸಾಮ್ರಾಜ್ಯ ಶಾಹಿಗಳ ಜೊತೆಗೆ ಕೈ ಜೋಡಿಸದೆ ಅವರ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ಪಕ್ಷದ ಸಾವಿರಾರು ನಾಯಕರು ದೇಶಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ’ ಎಂದರು.

ADVERTISEMENT

‘ಬ್ರಿಟಿಷರ ನಂತರ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಈವರೆಗೆ ದೇಶದ‌ ಬಡಜನತೆಗೆ ಸ್ವಾತಂತ್ರ್ಯ ದೊರೆತಿಲ್ಲ. ದೇಶದ ಕೆಲ ರಾಜಕೀಯ ಪಕ್ಷಗಳಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಬಡವರ್ಗದವರು, ಕೂಲಿಕಾರರು ಈವರೆಗೆ ಜಾತಿಯತೆ, ಮೇಲುಕೀಳು, ಮತ-ಧರ್ಮಗಳ ಸಂಘರ್ಷದಲ್ಲಿ ಸಿಲುಕಿಕೊಂಡು ಕಷ್ಟ ಜೀವನ ನಡೆಸುತ್ತಿದ್ದಾರೆ’ ಎಂ‌ದರು.

‘ಸದ್ಯ ಕಮ್ಯುನಿಸ್ಟ್ ಪಕ್ಷ 100 ವರ್ಷಗಳು ಪೂರೈಸಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿನ ಕೋಮುವಾದಿ ಪಕ್ಷಗಳು, ಬಂಡವಾಳಶಾಹಿಗಳು ಜನರ ಸ್ವಾತಂತ್ರ್ಯ ನಾಶ ಮಾಡಿವೆ. ದೇಶದಲ್ಲಿ ಬಡತನ, ನಿರುದ್ಯೋಗ, ಅತ್ಯಾಚಾರ, ರೈತರ ಆತ್ಮಹತ್ಯೆ, ಕಾರ್ಮಿಕ ಹಕ್ಕುಗಳ ನಾಶ, ವಿದ್ಯಾರ್ಥಿನಿಯರ ಕೊಲೆ, ಸಾರ್ವಜನಿಕರ ಸಂಪತ್ತು ಲೂಟಿ ಇವೆಲ್ಲವೂ ಹೆಚ್ಚಳವಾಗಿ ಜನರು ಭಯದ ವಾತಾವರಣದಲ್ಲಿ ಜೀವನ ನಡೆಯುತ್ತಿದ್ದಾರೆ’ ಎಂದ‌ರು.

ಪಕ್ಷದ ಪ್ರಮುಖ ಕೆ.ಎಸ್.ಜನಾರ್ಧನ್, ಷಣ್ಮುಖ, ಪ್ರಸನ್ನಕುಮಾರ, ಎ.ಹುಲಗಪ್ಪ, ಎ.ಎಲ್.ತಿಮ್ಮಣ್ಣ, ಲಕ್ಷ್ಮಣ, ಸುನೀತಾ, ನೀಲಮ್ಮ, ಗಂಗಮ್ಮ, ಬಸಮ್ಮ, ಹಂಪಸದುರ್ಗ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.