ADVERTISEMENT

ಕುಷ್ಟಗಿ | ಅತಿ ಮಳೆ, ಕೊಳೆಯುತ್ತಿವೆ ಬೆಳೆ

ರಾಶಿ ಮಾಡಲೂ ಸಿಗದ ಅವಕಾಶ: ರೈತರು ಕಂಗಾಲು

ನಾರಾಯಣರಾವ ಕುಲಕರ್ಣಿ
Published 27 ಸೆಪ್ಟೆಂಬರ್ 2025, 5:27 IST
Last Updated 27 ಸೆಪ್ಟೆಂಬರ್ 2025, 5:27 IST
ಬ್ಯಾಲಿಹಾಳದ ರೈತ ಭರಮಗೌಡ ಅವರ ಹತ್ತಿ ಹೊಲದಲ್ಲಿ ನೀರು ನಿಂತಿರುವುದು
ಬ್ಯಾಲಿಹಾಳದ ರೈತ ಭರಮಗೌಡ ಅವರ ಹತ್ತಿ ಹೊಲದಲ್ಲಿ ನೀರು ನಿಂತಿರುವುದು   

ಕುಷ್ಟಗಿ: ಈ ಭಾಗದ ರೈತರಿಗೆ ಹಸಿಬರಕ್ಕಿಂತ ಒಣ ಬರ ಪರಿಸ್ಥಿತಿಯ ಅನುಭವ ಬಹಳ. ಕಳೆದ ಎರಡು ದಶಕದ ಅವಧಿ ಗಮನಿಸಿದರೆ ರೈತರು ಮಳೆಯಾಗುತ್ತಿಲಿಲ್ಲವಲ್ಲ ಎಂದು ಕೊರಗಿದ ದಿನಗಳೇ ಹೆಚ್ಚು.

ಈ ಬಾರಿ ಮುಂಗಾರು ಹಂಗಾಮಿಗೆ ಉತ್ತಮ ರೀತಿಯ ಆರಂಭ ದೊರೆತರೂ ಬಿತ್ತನೆ ನಡೆಸಿ ಉತ್ತಮ ಬೆಳೆ ಕೈಗೆಟಕುವ ಖುಷಿಯಲ್ಲಿ ರೈತರಿಗೆ ಆ ಖುಷಿ ಬಹಳಷ್ಟು ದಿನ ಉಳಿಯುವಂತೆ ಕಾಣುತ್ತಿಲ್ಲ. ‘ಎಲ್ಲ ರಾಯರಿಗಿಂತ ದೊಡ್ಡಾತ ನಮ್ಮ ಮಳೆರಾಯ’ ಎನ್ನುತ್ತಿದ್ದ ರೈತ ಸಮೂಹ ಈಗ ‘ಸಾಕು ಬಿಡೊ ಮಾರಾಯ ನಮ್ಮನ್ನ ಕಾಪಾಡು’ ಎನ್ನುವಷ್ಟರ ಮಟ್ಟಿಗೆ ಅತಿಯಾಗಿ ಕಂಗಾಲಾಗುವಂತೆ ಮಾಡಿದೆ.

ಅತಿಯಾದ ತೇವಾಂಶದಿಂದ ಬೆಳೆಗಳು ಹೊಲದಲ್ಲಿಯೇ ಕೊಳೆಯುವ ಸ್ಥಿತಿಯಲ್ಲಿವೆ. ಸಜ್ಜೆ ಬೆಳೆಯನ್ನು ಇನ್ನೇನು ಕೊಯ್ದು ಗೂಡು ಹಾಕಬೇಕು ಅಥವಾ ತೆನೆ ಕಟಾವು ಮಾಡಿ ರಾಶಿಮಾಡಬೇಕು ಎನ್ನುವಷ್ಟರಲ್ಲಿ ಮಳೆ ಅದಕ್ಕೆ ಅವಕಾಶ ನೀಡದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎನ್ನುತ್ತಾರೆ ರೈತರು.

ಈ ಬಾರಿ ಬಹಳಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು ಸದ್ಯ ಕಟಾವು ಹಂತಕ್ಕೆ ಬಂದಿದೆ, ಇಲ್ಲಿಯವರೆಗೂ ಈ ಬೆಳೆಗೆ ತೊಂದರೆ ಇಲ್ಲ. ಆದರೆ ಇದೇ ರೀತಿ ಮಳೆ ಮುಂದುವರೆದರೆ ಕಷ್ಟ.

ಮುಂಗಾರು ಹೆಸರು, ಎಳ್ಳು ಹಾಳಾಗಿ ಹೋದವು, ಅತಿ ಹೆಚ್ಚು ಪ್ರದೇಶದಲ್ಲಿರುವ ತೊಗರಿ ಅಧಿಕ ತೇವಾಂಶದಿಂದ ಸಿಡಿರೋಗ (ಒಣಗುವುದು)ಕ್ಕೆ ತುತ್ತಾಗುವ ಸಾಧ್ಯತೆ ಇದೆ. ಎರೆ ಜಮೀನಿನಲ್ಲಿ ಬೆಳೆದಿರುವ ಈರುಳ್ಳಿ ದೊಡ್ಡಪ್ರಮಾಣದಲ್ಲಿ ಹಾನಿ ತಂದೊಡ್ಡಿದೆ. ಹೊಲದಲ್ಲಿಯೇ ಬಹಳಷ್ಟು ಕೊಳೆತರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಅದನ್ನು ಕೇಳುವವರೇ ಇಲ್ಲ ಎಂಬುದು ಮೇಗೂರಿನ ರೈತ ಹನುಮಂತಿ ಕತಿಗಾರ ಅವರದು. ಹಾಗಾಗಿ ಈರುಳ್ಳಿ ವಿಚಾರದಲ್ಲಿ ರೈತರಿಗೆ ಎರಡು ರೀತಿಯ ಪೆಟ್ಟು ಬಿದ್ದಿದೆ.

ಹತ್ತಿ ಹೊಲಗಳು ಬಹಳಷ್ಟು ಹಾನಿಯಾಗಿವೆ ಅಧಿಕ ತೇವಾಂಶದಿಂದ ತೊಗರಿಯೂ ಸಿಡಿ ರೋಗಕ್ಕೆ ಬಲಿಯಾಗುತ್ತಿದೆ
ವೀರನಗೌಡ ಮಾಲಿಪಾಟೀಲ ಜೂಲಕಟ್ಟಿ ರೈತ
ಮುಂಗಾರಿನ ಸಜ್ಜೆ ಎಳ್ಳು ಹೆಸರು ಈರುಳ್ಳಿ ಹಾಳಾಗಿದ್ದು ರೈತರ ಪರಿಸ್ಥಿತಿ ಗಂಭೀರವಾಗಿದೆ. ಆತ್ಮಸ್ಥೈರ್ಯ ತುಂಬಲು ಸರ್ಕಾರ ಮುಂದಾಗಬೇಕು
ರಾಮಣ್ಣ ಆಚಾರಿ ಗುಮಗೇರಾ ರೈತ
ಸರ್ಕಾರ ರೈತರ ಸ್ಥಿತಿಯನ್ನು ವಾಸ್ತವದಲ್ಲಿ ಗಮನಿಸಬೇಕು. ಮುಂಗಾರು ಬೆಳೆಗಳು ಎಷ್ಟೊಂದು ಹಾಳಾಗಿವೆ ಎಂಬ ನೈಜ ವರದಿ ಪಡೆದು ರೈತರಿಗೆ ನೆರವಾಗಬೇಕಿದೆ
ಬಸನಗೌಡ ದಿಡ್ಡಿಮನಿ ಮೇಗೂರು ರೈತ
ವಾಡಿಕೆಗಿಂತ ಶೇ21ರಷ್ಟು ಮಳೆ ಹೆಚ್ಚಾಗಿದೆ. ಸದ್ಯ ಬೆಳೆ ಹಾನಿಯಾಗಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದೇವೆ 
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ 

ಹುಸಿಯಾಗಲಿಲ್ಲ ಹಸಿ ಬರ ಒಣ ಪರಿಸ್ಥಿತಿಯನ್ನೇ ಅನುಭವಿಸಿದ ರೈತರಿಗೆ ಈ ಬಾರಿ ಬಹಳ ವರ್ಷಗಳ ನಂತರ ಹಸಿ ಬರ ಹೊಟ್ಟೆಗೆ ಬರೆ ಹಾಕುವಷ್ಟರ ಮಟ್ಟಿಗೆ ಮುಂದುವರೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಸುಲಭದಲ್ಲಿ ಬಿಡುವು ಮಾಡಿಕೊಳ್ಳುವ ಲಕ್ಷಣಗಳಿಲ್ಲ ಎನ್ನಲಾಗುತ್ತಿದೆ. ಮುಂಗಾರು ಬಿಟ್ಟರೆ ಮಸಾರಿ (ಕೆಂಪು) ಜಮೀನಿನ ರೈತರಿಗೆ ಪರ್ಯಾಯ ಬೆಳೆ ಅವಕಾಶವೇ ಇಲ್ಲ. ಮತ್ತೆ ಮುಂದಿನ ಮುಂಗಾರಿನವರೆಗೂ ಕಾಯಬೇಕು. ಭವಿಷ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬುದು ದೊಡ್ಡ ಚಿಂತೆಯಾಗಿದೆ ಎನ್ನುತ್ತಾರೆ ಚಳಗೇರಿಯ ರೈತ ವೀರಭದ್ರಪ್ಪ. ಎರೆ ಜಮೀನಿನ ರೈತರಿಗೆ ಎರಡೂ ಹಂಗಾಮಿನ ಅವಕಾಶವಿದ್ದರೂ ಹೆಸರು ಹೊಲದಲ್ಲೇ ಕೊಳೆಯಿತು. ಈಗ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ನಡೆಸುವುದಕ್ಕೆ ಮಳೆ ಬಿಡುತ್ತಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.