ADVERTISEMENT

ಕುಷ್ಟಗಿ : ಆಗಸ್ಟ್‌ ಮಳೆಗೆ 188.45 ಹೆಕ್ಟೇರ್‌ ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:28 IST
Last Updated 19 ಸೆಪ್ಟೆಂಬರ್ 2025, 6:28 IST
ಕುಷ್ಟಗಿ ತಾಲ್ಲೂಕಿನ ತಾವರಗೇರಾ ಭಾಗದಲ್ಲಿ ಹಾನಿಯಾದ ಬೆಳೆಯ ನೋಟ
ಕುಷ್ಟಗಿ ತಾಲ್ಲೂಕಿನ ತಾವರಗೇರಾ ಭಾಗದಲ್ಲಿ ಹಾನಿಯಾದ ಬೆಳೆಯ ನೋಟ   

ಕೊಪ್ಪಳ: ವಾಡಿಕೆಗಿಂತಲೂ ಹೆಚ್ಚು ಹಾಗೂ ಅಗತ್ಯವಿರದ ಸಂದರ್ಭದಲ್ಲಿ ಆಗಸ್ಟ್‌ನಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ ಕೃಷಿಯ 168.45 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ ಕುಷ್ಟಗಿ ತಾಲ್ಲೂಕಿನಲ್ಲಿಯೇ ಹಾನಿ ಪ್ರಮಾಣ ಹೆಚ್ಚಾಗಿದೆ.

ತೋಟಗಾರಿಕೆ ಬೆಳೆಗಳಾದ ಬಾಳೆ, ದಾಳಿಂಬೆ, ಮಾವು ಸೇರಿದಂತೆ ಒಟ್ಟು 25 ಹೆಕ್ಟೇರ್‌ನಷ್ಟು ಹಾನಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಹಾನಿಯ ಪ್ರಮಾಣ 188.45 ಹೆಕ್ಟೇರ್‌ನಷ್ಟು ಆಗಿದೆ.

ಈ ಸಲ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಗಂಗಾವತಿ, ಕಾರಟಗಿ, ಕನಕಗಿರಿ ಭಾಗ ಹೊರತುಪಡಿಸಿ ರೈತರು ತೊಗರಿ, ಮೆಕ್ಕೆಜೋಳ ಹೆಚ್ಚು ಬಿತ್ತನೆ ಮಾಡಿದ್ದರು. ರಾಜ್ಯದ ದಕ್ಷಿಣ ಭಾಗದ ಮತ್ತು ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿದು ಜನರ ಬದುಕು ಮೂರಾಬಟ್ಟೆಯಾಗಿತ್ತು. ಆದರೆ ಜಿಲ್ಲೆಯಲ್ಲಿ ಕೆಲವು ದಿನಗಳ ಕಾಲ ನಿರಂತರ ಮಳೆ ಸುರಿದರೆ, ಇನ್ನೂ ಕೆಲವು ದಿನಗಳ ಕಾಲ ಮಳೆಯ ದರ್ಶನವೇ ಇಲ್ಲದಂತಾಗಿತ್ತು. ಬಿಡುವು ನೀಡಿ ಸುರಿದ ಮಳೆಯಿಂದಾಗಿ ಯೂರಿಯಾ ರಸಗೊಬ್ಬರದ ಕೊರತೆಯೂ ಆಯಿತು.

ADVERTISEMENT

ಹೀಗೆ ಮಳೆಯ ಏರಿಳಿತದ ಪರಿಣಾಮ ಕೃಷಿ ಮೇಲೂ ಆಗಿದ್ದು, ಅನೇಕ ರೈತರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಮಳೆ ಬಾರಲಿಲ್ಲ. ಇನ್ನೂ ಕೆಲ ಸಂದರ್ಭದಲ್ಲಿ ಫಸಲು ಕೈಗೆ ಬರಲು ಸಿದ್ಧವಾಗಿದ್ದಾಗ ಧೋ ಎಂದು ಮಳೆ ಸುರಿದಿದ್ದ ಹಾನಿಗೆ ಕಾರಣವಾಗಿದೆ ಎನ್ನುತ್ತಾರೆ ರೈತರು.

ತೊಗರಿ ಗರಿಷ್ಠ ಹಾನಿ: ಜಿಲ್ಲೆಯಲ್ಲಿ ಆಗಸ್ಟ್‌ ಮಳೆಯಿಂದಾಗಿ ತೊಗರಿ ಬೆಳೆಗೆ ಗರಿಷ್ಠ ಪ್ರಮಾಣದಲ್ಲಿ ಹಾನಿಯಾಗಿದೆ. ಒಟ್ಟು 73.92 ಹೆಕ್ಟೇರ್‌ ಪ್ರದೇಶ ಕುಷ್ಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ತೊಗರಿ ಹಾಳಾಗಿದ್ದು, ಇದೇ ತಾಲ್ಲೂಕಿನ ವಣಗೇರಿ (10.85 ಹೆಕ್ಟೇರ್‌), ಟಕ್ಕಳಕಿ (14.84), ಮುದೇನೂರು (6.78), ಶಿರಗುಂಪಿ (8.44), ಕಿಡದೂರು (9) ಬೆಳೆ ನಷ್ಟವಾಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳು ದಾಖಲಿಸಿದ ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ.

ಜಿಲ್ಲೆಯಲ್ಲಿ ಮೆಕ್ಕಜೋಳ ಒಟ್ಟು 36.54 ಹೆಕ್ಟೇರ್‌ನಷ್ಟು ಹಾಳಾಗಿದ್ದು ಕುಕನೂರು ತಾಲ್ಲೂಕಿನಲ್ಲಿ 16.4, ಯಲಬುರ್ಗಾ ತಾಲ್ಲೂಕಿನಲ್ಲಿ ಆರು ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ 14.09 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಜೋಳ ನೆಲಕ್ಕೊರಗಿದೆ. ಹತ್ತಿ ಬೆಳೆಯಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯಿಂದಾಗಿ 25.31 ಹೆಕ್ಟೇರ್‌ನಷ್ಟು ಹಾನಿಯ ಸಂಕಷ್ಟ ಎದುರಾಗಿದ್ದು, ಇದರಲ್ಲಿ 23.71 ಹೆಕ್ಟೇರ್‌ನಲ್ಲಿ ಹತ್ತಿ ಮಳೆ ನೀರಿನ ಪಾಲಾಗಿದೆ.

ಇನ್ನುಳಿದಂತೆ ಸಜ್ಜೆ, ಹೆಸರು, ಜೋಳ, ಸಜ್ಜೆ, ಶೇಂಗಾ, ಸೂರ್ಯಕಾಂತಿ, ಎಳ್ಳು ಮತ್ತು ಕಬ್ಬು ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ.

ಕೃಷ್ಣ ಸಿ. ಉಕ್ಕುಂದ
ಬಾಳೆ ದಾಳಿಂಬೆ ಮಾವು ಸೇರಿದಂತೆ ಒಟ್ಟು 20 ಹೆಕ್ಟೇರ್‌ನಷ್ಟು ಮಾತ್ರ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಸೆಪ್ಟೆಂಬರ್‌ ಅಂತ್ಯದಿಂದ ತೋಟಗಾರಿಕಾ ಕೃಷಿ ಚುರುಕುಪಡೆದುಕೊಳ್ಳಲಿದೆ.
ಕೃಷ್ಣ ಸಿ. ಉಕ್ಕುಂದ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಅತಿಯಾದ ಮಳೆಯಿಂದಾಗಿ ಆದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಬರಲಿದೆ. ದತ್ತಾಂಶ ದಾಖಲಿಸಲು ತಿಳಿಸಲಾಗಿದ್ದು ಪ್ರತಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಪರಿಹಾರ ಸಿಗಲಿದೆ. ಒಂದು ಹೆಕ್ಟೇರ್‌ಗೆ ₹13500 ಸಾವಿರ ನಿಗದಿಯಾಗಿದೆ. 
ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ

ಕುಷ್ಟಗಿ ತಾಲ್ಲೂಕಿನಲ್ಲಿ ಶೇ. 75ರಷ್ಟು ಅಧಿಕ ಮಳೆ ಆಗಸ್ಟ್‌ನಲ್ಲಿ ಕುಷ್ಟಗಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಶೇ. 75ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆ ಲೆಕ್ಕಾಚಾರದಲ್ಲಿ 8.21 ಸೆಂ.ಮೀ.ನಷ್ಟು ಮಳೆಯಾಗಬೇಕಿತ್ತು. ವಾಸ್ತವವಾಗಿ 14.37 ಸೆಂ.ಮೀ. ಮಳೆಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಶೇ. 41 ಕೊಪ್ಪಳ ಶೇ .26 ಯಲಬುರ್ಗಾ ಶೇ. 111 ಕನಕಗಿರಿ ಶೇ. 118 ಕುಕನೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶೇ. 9.1ರಷ್ಟು ಮಳೆ ಸುರಿದಿದ್ದರೆ ಕಾರಟಗಿಯಲ್ಲಿ ವಾಡಿಕೆಯಷ್ಟೇ ಮಳೆ ಬಂದಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.