ADVERTISEMENT

ಯಲಬುರ್ಗಾ: ಹೆಸರು ಬೆಳೆಯಲ್ಲಿ ಹಳದಿ ರೋಗ

ರೈತರ ಜಮೀನುಗಳಿಗೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 2:58 IST
Last Updated 12 ಜುಲೈ 2021, 2:58 IST
ಯಲಬುರ್ಗಾ ತಾಲ್ಲೂಕು ಬೇವೂರು ಹೊರವಲಯ ಹಾಗೂ ಮಂಗಳೂರು ಭಾಗದ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು
ಯಲಬುರ್ಗಾ ತಾಲ್ಲೂಕು ಬೇವೂರು ಹೊರವಲಯ ಹಾಗೂ ಮಂಗಳೂರು ಭಾಗದ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು   

ಯಲಬುರ್ಗಾ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹೆಸರು ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಸಲಹೆ ನೀಡಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೃಷಿ ವಿಜ್ಞಾನಿ ಎಂ.ಬಿ.ಪಾಟೀಲ, ಡಾ. ಹನಮಂತಪ್ಪ ದಾಸನಾಳ, ಕೃಷಿ ಅಧಿಕಾರಿ ಪ್ರತಾಪಗೌಡ ಸೇರಿ ಅನೇಕರು ಭೇಟಿ ನೀಡಿ ಅಗತ್ಯ ಕ್ರಮಗಳು ಹಾಗೂ ಔಷಧಿ ಸಿಂಪಡಣೆ ಕುರಿತು ಮಾಹಿತಿ ನೀಡಿದರು.

‘ಎರಡು ವಾರಗಳಿಂದ ಮಳೆ ಸುರಿಯುತ್ತಿದೆ. ತೇವಾಂಶ ಹೆಚ್ಚಾಗಿ ಹೆಸರು ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ. ಪ್ರಾರಂಭದಲ್ಲಿ ಎಲೆ ಮೇಲೆ ಹಳದಿ ಬಣ್ಣದ ಚುಕ್ಕಿ ಕಾಣಿಸಿಕೊಳ್ಳುತ್ತದೆ. ಬಳಿಕ ಎಲೆ ಪೂರ್ತಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಅದು ನಂಜಾಣು ರೋಗವಾಗಿ ಪರಿವರ್ತನೆಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಲಹೆ: ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು. ಒಂದು ಮಿಲಿ ಲೀಟರ್ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಯಾವುದೇ ಕಾರಣಕ್ಕೂ ಕೀಟ ನಾಶಕದೊಂದಿಗೆ ಬೇವಿನ ಎಣ್ಣೆ ಮಿಶ್ರಣ ಮಾಡಬಾರದು. ಇಮಿಡಾಕ್ಲೋಪ್ರಿಡ್ 0.5 ಮಿ.ಲೀ ಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವ ಮೂಲಕ ರೋಗ ಗುಣಪಡಿಸಬಹುದಾಗಿದೆ ಎಂದು ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಯಲಬುರ್ಗಾ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಗೋಣಿಬಸಪ್ಪ, ಮಂಗಳೂರು ಕೇಂದ್ರದ ಅಧಿಕಾರಿ ಪ್ರತಾಪಗೌಡ, ಶಿವಪ್ಪ ಕೊಂಡಗುರಿ, ಚೆನ್ನಬಸನಗೌಡ, ಗಂಗಾಧರ ಬಿಂಗಿ ಹಾಗೂ ರವಿ ಮುದೇನೂರು ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.