ADVERTISEMENT

ಬೆಳೆವಿಮೆ- ಸರ್ಕಾರವೇ ಪಾವತಿಸಲಿ

ಸಬ್ಸಿಡಿ ದರದಲ್ಲಿ ಗೊಬ್ಬರ, ಔಷಧಿಗೆ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:02 IST
Last Updated 8 ಅಕ್ಟೋಬರ್ 2022, 6:02 IST
ಕೋಲಾರದಲ್ಲಿ ಶುಕ್ರವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘದವರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಕೋಲಾರದಲ್ಲಿ ಶುಕ್ರವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘದವರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಕೋಲಾರ: ಬಿತ್ತನೆ ಆಲೂಗಡ್ಡೆ, ಗೊಬ್ಬರ, ಔಷಧಿಯನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡುವ
ಜೊತೆಗೆ ಬೆಳೆ ವಿಮೆ ಹಣವನ್ನು ಸರ್ಕಾರವೇ ಪಾವತಿಸಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತ ಸಂಘದವರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ
ಸಲ್ಲಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ‘ರೈತರು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಮುಂಗಾರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಹಾಕಿದ ಬಂಡವಾಳ ಕೈಗೆ ಸಿಗದೆ ಸಾಲದ ಸುಳಿಗೆ ಸಿಲುಕಿರುವ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು’ ಎಂದು
ಒತ್ತಾಯಿಸಿದರು.

‘ಟೊಮೆಟೊ, ಕ್ಯಾಪ್ಸಿಕಂ ಬೆಳೆಯಲ್ಲಿ ಕೈ ಸುಟ್ಟುಕೊಂಡಿರುವ ರೈತರು ಛಲ ಬಿಡದೆ ಮತ್ತೆ ಆಲೂಗಡ್ಡೆ ಬಿತ್ತನೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ‘ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುವ ಬೆಳೆಯನ್ನು ಅಂಗಮಾರಿ ನುಸಿ ಊಜಿ ರೋಸ್ ಮತ್ತಿತರರ ರೋಗಗಳಿಂದ ರಕ್ಷಣೆ ಮಾಡಬೇಕು. ‌ನಕಲಿ ಔಷಧಿಗಳ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿವರ್ಷ ಅತಿವೃಷ್ಟಿ, ಅನಾವೃಷ್ಟಿಗೆ ನಷ್ಟವಾಗಿರುವ ಬೆಳೆ ರಕ್ಷಣೆಗೆ ಸರ್ಕಾರದಿಂದ ಕರಪತ್ರದ ಮುಖಾಂತರ ವಿಮೆ ಮಾಡಿಸುವಂತೆ ಜಾಗೃತಿ ಮೂಡಿಸಬೇಕು. ವಿಮೆ ಕಟ್ಟಿಸಿಕೊಂಡ ಕಂಪನಿಗಳು ನಷ್ಟದ ಸಮಯದಲ್ಲಿ
ರೈತರಿಗೆ ಸ್ಪಂದಿಸದೆ ನಾಪತ್ತೆಯಾಗಿರುವ ಉದಾಹರಣೆಗಳು ಇವೆ.
ಅಂತಹ ವಿಮಾ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸಂಕಷ್ಟದಲ್ಲಿರುವ
ರೈತರ ರಕ್ಷಣೆಗೆ ಈ ವರ್ಷ ಸರ್ಕಾರವೇ ವಿಮಾ ಕಂತಿನ ಹಣವನ್ನು ಪಾವತಿಸಬೇಕು’ ಎಂದು
ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ,
ಕುವ್ವಣ್ಣ, ಫಾರೂಖ್ ಪಾಷ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಮುದುವಾಡಿ ಚಂದ್ರಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.