ADVERTISEMENT

ಟೀಕೆ ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 13:10 IST
Last Updated 21 ಆಗಸ್ಟ್ 2024, 13:10 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಕೊಪ್ಪಳ: ‘ತುಂಗಭದ್ರಾ ಅಣೆಕಟ್ಟು ಕ್ರಸ್ಟ್‌ಗೇಟ್‌ ಅವಘಡ ವಿಚಾರವಾಗಿ ವಿರೋಧ ಪಕ್ಷಗಳು ಕೇವಲ ಟೀಕೆ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ನಮ್ಮ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಇಲ್ಲಿಗೆ ಸಮೀಪದ ಗಿಣಿಗೇರ ಏರ್‌ಸ್ಕ್ರಿಪ್‌ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಮ್ಮ ತಂತ್ರಜ್ಞರು, ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಅವಘಡ ನಡೆದ ದಿನದಿಂದಲೂ ನಿತ್ಯ ನಿಗಾ ವಹಿಸಿ ಕೆಲಸ ಮಾಡಿದ್ದಾರೆ. ನಮ್ಮ ರೈತರನ್ನು ನಾವು ರಕ್ಷಿಸಿದ್ದೇವೆ’ ಎಂದರು.

ತುಂಗಭದ್ರಾ ಅಣೆಕಟ್ಟಿನ ಆಯಸ್ಸು ಕಡಿಮೆಯಿದೆ ಎನ್ನುವ ಪ್ರಶ್ನೆಗೆ ‘ಯಾವ ಆಯಸ್ಸು ಕಡಿಮೆಯಿಲ್ಲ. ತುಂಗಭದ್ರಾ ಅಣೆಕಟ್ಟು ಕಟ್ಟುವಾಗಲೇ ಪ್ರತಿವರ್ಷ ಅರ್ಧ ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಳ್ಳುತ್ತದೆ ಎನ್ನುವ ವರದಿಯಿತ್ತು ಎಂದು ಎಂ.ಬಿ.ಪಾಟೀಲರು ಮೊದಲೇ ಹೇಳಿದ್ದರು. ಮುಂದಿನ ದಿನಗಳಲ್ಲಿ ಪ್ರವಾಸ ನಡೆಸಿ ನವಲಿ ಸಮತೋಲಿತ ಅಣೆಕಟ್ಟಿನ ವಿಚಾರವಾಗಿ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಕ್ರಸ್ಟ್‌ಗೇಟ್‌ಗಳ ಅವಧಿ ಮುಕ್ತಾಯವಾಗಿದ್ದರೂ ಬದಲಾವಣೆ ಯಾಕೆ ಮಾಡಿಲ್ಲ ಎನ್ನುವ ಪ್ರಶ್ನೆಗೆ ‘ನಾನು ತಂತ್ರಜ್ಞನಲ್ಲ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ಕಾಯಲು ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆಯಾಗಲಿದ್ದು, ಆದಷ್ಟು ಬೇಗನೆ ತುಂಗಭದ್ರಾ ಜಲಾಶಯ ಭರ್ತಿಯಾಗಲಿದೆ. ಆಗ ನಾವೇ ಬಂದು ಬಾಗಿನ ಅರ್ಪಿಸುತ್ತೇವೆ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.