ADVERTISEMENT

ದಲಿತ ಮಹಿಳೆ ಮೇಲೆ ಹಲ್ಲೆ: ಅಮ್ಮನ ರಕ್ಷಣೆಗಾಗಿ ಓಡೋಡಿ ಬಂದು ವಿಡಿಯೊ ಮಾಡಿದ ಮಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:20 IST
Last Updated 10 ಫೆಬ್ರುವರಿ 2023, 5:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಕೊಪ್ಪಳ: ದನ ಹೊಲದಲ್ಲಿನ ಬೆಳೆ ತಿಂದು ಹಾಕಿದೆ ಎನ್ನುವ ಕಾರಣಕ್ಕಾಗಿ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಇತ್ತೀಚೆಗೆ ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್‌ ಖರ್ಗೆ ಸರ್ಕಾರಕ್ಕೆ ಟ್ವಿಟರ್ ಮೂಲಕ ಚಾಟಿ ಬೀಸಿದ್ದಾರೆ.

ದನದ ಮಾಲೀಕರಾದ ದಲಿತ ಮಹಿಳೆ ಶೋಭಾ ಎಂಬುವರ ಮೇಲೆ ಹೊಲದ ಮಾಲೀಕ ಅಮರೇಶ ಕುಂಬಾರ ಹಲ್ಲೆ ಮಾಡಿದ್ದಾನೆ. ತಮ್ಮ ಹೊಲದ ಬೆಳೆಯನ್ನು ಹಾಳು ಮಾಡಿದ್ದರಿಂದ ದನವನ್ನು ಕಟ್ಟಿ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಅಮರೇಶ ಅವರ ಮನೆಗೆ ಬಂದ ಮಹಿಳೆ ದನ ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾಳೆ. ಆಕ್ರೋಶಗೊಂಡ ಅಮರೇಶ ಮಹಿಳೆ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಕನಕಗಿರಿ ಠಾಣೆಯಲ್ಲಿ ಫೆ. 3ರಂದು ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣ ದಾಖಲಾಗಿತ್ತು.

ADVERTISEMENT

ಮಾಧ್ಯಮಗಳಲ್ಲಿ ಪ್ರಕಟವಾದ ಈ ವರದಿಯನ್ನು ಲಗತ್ತಿಸಿರುವ ಪ್ರಿಯಾಂಕ್‌ ಖರ್ಗೆ ‘ಬಿಜೆಪಿ ಆಳ್ವಿಕೆಯಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ ಹಾಗೂ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಜಮೀನ್ದಾರರ ಜಮೀನಿಗೆ ಹಸು ನುಗ್ಗಿದೆ ಎನ್ನುವ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ. ಹಸಿವಿನಲ್ಲಿಯೂ ಮೇಲ್ಜಾತಿ ಹಾಗೂ ಕೆಳಜಾತಿ ಎನ್ನುವುದು ಇದೆಯೇ? ತಪ್ಪಿತಸ್ಥರಿಗೆ ಈ ಬಿಜೆಪಿ ಆಡಳಿತದಲ್ಲಿ ಶಿಕ್ಷೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಅಮ್ಮನ ರಕ್ಷಣೆಗೆ ಬಂದ ಮಗಳು: ಕಳೆದು ಹೋಗಿದ್ದ ದನವನ್ನು ಹುಡುಕಲು ನನ್ನ ಪತ್ನಿ ಶೋಭಾ ಹಾಗೂ ಮಗಳು ಹೋಗಿದ್ದರು. ಅಮರೇಶ ಕುಂಬಾರ ಹೊಲದಲ್ಲಿ ದನಗಳು ಸಿಕ್ಕ ಕಾರಣ ಪತ್ನಿ ಮಗಳನ್ನು ವಾಪಸ್‌ ಕಳುಹಿಸಿದಳು. ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಾರೆ ಎನ್ನುವ ಆತಂಕದಿಂದ ಮಗಳು ಓಡೋಡಿ ಮನೆಗೆ ಹೋಗಿ ಮೊಬೈಲ್‌ ಫೋನ್‌ ತಂದು ಹಲ್ಲೆಯ ವಿಡಿಯೊ ಮಾಡಿದ್ದಾಳೆ ಎಂದು ಶೋಭಾ ಪತಿ ರಮೇಶ ಪವಾರ್‌ ತಿಳಿಸಿದರು. ತಾಯಿಗೆ ಹೊಡೆಯುವಾಗ ಮಗಳು ಜೋರಾಗಿ ಅಳುತ್ತಿದ್ದ ಚಿತ್ರಣದ ವಿಡಿಯೊ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.