ADVERTISEMENT

ಗಾಂಧೀಜಿ ಪ್ರತಿಮೆಗೆ ಹಾನಿ

ಬಸಾಪುರ: ಕೃತ್ಯವೆಸಗಿದ ಮದ್ಯವ್ಯಸನಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:22 IST
Last Updated 18 ಜೂನ್ 2021, 5:22 IST
ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮಕ್ಕೆ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಮೌನೇಶ್ವರ ಪಾಟೀಲ ಇದ್ದಾರೆ
ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮಕ್ಕೆ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಮೌನೇಶ್ವರ ಪಾಟೀಲ ಇದ್ದಾರೆ   

ಕೊಪ್ಪಳ: ಸಮೀಪದ ಬಸಾಪುರ ಗ್ರಾಮದಲ್ಲಿ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ.

ಬಂಧಿತ ಯುವಕನನ್ನು ಮಹೇಶ ಕಲ್ಯಾಣಪ್ಪ (35) ಎಂದು ಗುರುತಿಸಲಾಗಿದೆ.

ಬಸಾಪುರ ಗ್ರಾಮ ಮದ್ಯಮುಕ್ತ ಗ್ರಾಮವೆಂದು ಘೋಷಣೆ ಮಾಡಿ ಗ್ರಾಮಸ್ಥರು ಪ್ರೀತಿಯಿಂದ ಸುಂದರವಾದ ಗಾಂಧಿ ತಾತನ ನಿಂತಭಂಗಿಯ ಆಳೆತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು. ಅಲ್ಲದೆ ಸುತ್ತಮುತ್ತಲು ಕಟ್ಟೆಯನ್ನು ಕಟ್ಟೆ ಗ್ರಿಲ್‌ ಅಳವಡಿಸಿದ್ದರು.

ADVERTISEMENT

ಆದರೆ, ಏಕಾಏಕಿ ನಡೆದ ಈ ಘಟನೆಯಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದರು. ಮಹೇಶ ಮಾಡಿದ ಕುಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಳೆದ ಐದಾರು ವರ್ಷಗಳಿಂದ ದುಡಿಯಲು ಮಂಗಳೂರಿಗೆ ಹೋಗಿದ್ದ, ಲಾಕ್‌ಡೌನ್‌ ಕಾರಣದಿಂದ ಕಳೆದ ಏಪ್ರಿಲ್‌ನಲ್ಲಿ ಗ್ರಾಮಕ್ಕೆ ಮರಳಿದ್ದ ಎನ್ನಲಾಗಿದೆ.

ಗಾಂಧೀಜಿ ಮೂರ್ತಿಯ ಕಾಲುಗಳನ್ನು ಹಾನಿ ಮಾಡಿ ಅದನ್ನು ಕೆಳಗೆ ಇಟ್ಟಿದ್ದಲ್ಲದೆ, ತಡೆಯಲು ಬಂದ ಗ್ರಾಮಸ್ಥರಿಗೆ ಮಾರಕ ಆಯುಧ ತೋರಿಸಿ ಹೆದರಿಸಿದ ಎನ್ನಲಾಗಿದೆ. ಮದ್ಯವ್ಯಸನಿಯಾಗಿದ್ದ ಮಹೇಶ ಮಾಡಿದ ಅವಾಂತರದಿಂದ ಬೆದರಿದ ಜನರು ಪೊಲೀಸರಿಗೆ ಕರೆ ಮಾಡಿ ತಿಳಿಸಿದರು.

ಸ್ಥಳಕ್ಕೆ ತೆರಳಿದ ಪೊಲೀಸರು ಮಹೇಶ ಎಂಬುವವನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುದ್ದಿ ತಿಳಿದು ಗುರುವಾರ ಸಂಸದ ಸಂಗಣ್ಣ ಕರಡಿ ಸ್ಥಳಕ್ಕೆ ತೆರಳಿ ಗಾಂಧೀಜಿ ಪ್ರತಿಮೆಗೆ ಮಾಡಿದ ಅವಮಾನವನ್ನು ಖಂಡಿಸಿದರಲ್ಲದೆ, ದುಷ್ಕೃತ್ಯ ಎಸಗಿದ ಆರೋಪಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಕೃತ್ಯದ ವಿರುದ್ಧ ಸಂಸದರ ಎದುರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರಾಮದ ಹಿರಿಯರೊಂದಿಗೆ ಮಾತನಾಡಿ, ಮುಂದೆ ಇಂತಹ ಕೃತ್ಯ ಜರುಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ಮೊದಲಿದ್ದ ಹಾಗೆ ಸುಂದರವಾದ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ತಮ್ಮ ಸಹಕಾರ ಕೂಡಾ ಇರಲಿದೆ ಎಂದರು.

ಗ್ರಾಮದಲ್ಲಿ ಉದ್ವಿಘ್ನ ವಾತಾವರಣವಿದ್ದು, ಪೊಲೀಸ್‌ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಸ್ಥಳಕ್ಕೆ ಸಿಪಿಐ ಮೌನೇಶ್ವರ ಪಾಟೀಲ, ಪಿಎಸ್‌ಐ ಸುಪ್ರೀತ್ ಪಾಟೀಲ ಭೇಟಿ ನೀಡಿದರು. ಮುಖಂಡರಾದ ಫಾಲಾಕ್ಷಪ್ಪ ಗುಂಗಾಡಿ, ಪ್ರದೀಪ ಹಿಟ್ನಾಳ್, ರಾಮಾಂಜನೇಯ, ರಫಿ, ಸುಬ್ಬರೆಡ್ಡಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.