ಕೊಪ್ಪಳ: ಜಿಲ್ಲೆಯಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು ಹಬ್ಬದ ಮೊದಲ ದಿನ ಜಿಲ್ಲಾಕೇಂದ್ರದಲ್ಲಿ ದೇವಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.
ಅಲಂಕೃತಗೊಂಡ ವಾಹನದಲ್ಲಿ ಬೃಹತ್ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಕುಂಭ ಹೊತ್ತು ಸಾಗಿದರು. ಬಳಿಕ ಪೂಜೆ ನೆರವೇರಿಸುವ ಮೂಲಕ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಲಾಯಿತು.
ಶರನ್ನವರಾತ್ರಿಯ ಮೊದಲ ದಿನ ಸೂರ್ಯೋದಯಕ್ಕಿಂತಲೂ ಮೊದಲು ಮಹಿಳೆಯರು ತಮ್ಮ ಮನೆ ಸಮೀಪದ ಅಲಂಕೃತ ಬನ್ನಿಗಿಡಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಜಿಲ್ಲಾಕೇಂದ್ರದ ಹಲವು ಸ್ಥಳಗಳಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಅಲ್ಲಿಯೂ ವಿಶೇಷ ಪೂಜಾ ಕಾರ್ಯಗಳು ನಡೆದವು.
ನಗರದ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಮೊದಲ ದಿನ ಅರಿಶಿಣ ಮತ್ತು ಕುಂಕುಮದ ಅಲಂಕಾರ ಮಾಡಲಾಗಿತ್ತು. ಗೋವಿಂದರಾಯನ ಗುಡಿ ಆವರಣದಲ್ಲಿ ದುರ್ಗಾದೇವಿ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪಿಸಲಾಗುವ ದುರ್ಗಾದೇವಿ ಮೂರ್ತಿ ಮೆರವಣಿಗೆಯಲ್ಲಿ ಕುಂಭ, ಕಳಸದ ಮೆರವಣಿಗೆ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.