ADVERTISEMENT

ಕೊಪ್ಪಳ | ಕೊರೊನಾ ಭೀತಿ: ವೀಳ್ಯದೆಲೆಗೆ ಬೇಡಿಕೆ ಕುಸಿತ!

ಬೆಳೆಗಾರರಿಗೆ ಮಾರುಕಟ್ಟೆ ಕೊರತೆ

ಕಿಶನರಾವ್‌ ಕುಲಕರ್ಣಿ
Published 23 ಜುಲೈ 2020, 2:07 IST
Last Updated 23 ಜುಲೈ 2020, 2:07 IST
ಹನುಮಸಾಗರ ಭಾಗದ ವಿವಿಧ ಹಳ್ಳಿಗಳಲ್ಲಿರುವ ವೀಳ್ಯದೆಲೆ ತೋಟಗಳು, ಮಳೆಗಾಲದ ಈ ಸಮಯದಲ್ಲಿ ಚಿಗುರು ಎಲೆ ಹೊಂದಿ ಸಮೃದ್ಧವಾಗಿ ಕಾಣುತ್ತವೆ
ಹನುಮಸಾಗರ ಭಾಗದ ವಿವಿಧ ಹಳ್ಳಿಗಳಲ್ಲಿರುವ ವೀಳ್ಯದೆಲೆ ತೋಟಗಳು, ಮಳೆಗಾಲದ ಈ ಸಮಯದಲ್ಲಿ ಚಿಗುರು ಎಲೆ ಹೊಂದಿ ಸಮೃದ್ಧವಾಗಿ ಕಾಣುತ್ತವೆ   

ಹನುಮಸಾಗರ: ವೀಳ್ಯದೆಲೆ ಹಾಗೂ ಕರಿ ಎಲೆಗೆ ಈ ಭಾಗದ ಯರಗೇರಾ, ಕುಂಬಳಾವತಿ, ಮದ್ನಾಳ, ಮಡಿಕ್ಕೇರಿ, ಗುಡದೂರಕಲ್, ಮಾವಿನಇಟಗಿ ಗ್ರಾಮಗಳು ಹೆಸರಾಗಿವೆ. ಅಲ್ಲದೆ ಹಲವು ವರ್ಷಗಳಿಂದಲೂ ಈ ಭಾಗದ ರೈತರಿಗೆ ಎಲೆಬಳ್ಳಿ ಬೇಸಾಯ ಪ್ರಮುಖವಾಗಿದೆ.

ಒಂದು ತಿಂಗಳಿನಿಂದ ಸಾಧಾರಣ ಮಳೆ ಸುರಿದ ಕಾರಣವಾಗಿ ವೀಳ್ಯದೆಲೆ ತೋಟಗಳು ಚಿಗುರು ಎಲೆ ಹೊಂದಿ ಸಮೃದ್ಧ ಫಸಲು ಹೊತ್ತು ನಿಂತಿವೆ. ಆದರೆ ಕೊರೊನಾ ಭೀತಿಯ ಕಾರಣವಾಗಿ ರೈತರಿಗೆ ಮಾರುಕಟ್ಟೆಯೇ ಇಲ್ಲದಂತಾಗಿದ್ದು, ಎಲೆ ಕೊಯಿಲು ಆಗದೆ ಬಳ್ಳಿಯಲ್ಲಿಯೇ ಬಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಎರಡು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲ. ಅಂತರ್ಜಲ ಕುಸಿತವಾಗಿರುವುದರಿಂದ ಎಲ್ಲಾ ಕೊಳವೆಬಾವಿಗಳ ಬತ್ತಿ ಹೋಗಿದ್ದವು. ಬಾಡಿದ್ದ ಎಲೆ ಬಳ್ಳಿಗಳನ್ನು ಉಳಿಸಿಕೊಳ್ಳುವುದಕ್ಕಾಗಿ ರೈತರು ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದಾರೆ.

ADVERTISEMENT

ಇದೀಗ ನಾಲ್ಕು ತಿಂಗಳಿಂದ ಕೊರೊನಾ ಸಮಸ್ಯೆಯಿಂದಾಗಿ ಮಾರುಕಟ್ಟೆ ಹಾಗೂ ಅಂಗಡಿಗಳು ಬಂದ್ ಆಗಿವೆ. ಮದುವೆ, ಶುಭ ಕಾರ್ಯಕ್ರಗಳು ನಡೆಯುತ್ತಿಲ್ಲ. ಹೀಗಾಗಿ ವೀಳ್ಯದೆಲೆ ಸದ್ಯ ಯಾರಿಗೂ ಬೇಡವಾಗಿದೆ.

ಕೊರೊನಾ ದಿನಗಳಿಗಿಂತ ಮೊದಲು ಹನುಮಸಾಗರ ಹೊಸಬಸ್ ನಿಲ್ದಾಣದ ಬಳಿ ದೊಡ್ಡ ಪ್ರಮಾಣದಲ್ಲಿ ವೀಳ್ಯದೆಲೆ ಹರಾಜು ಪ್ರಕ್ರಿಯೆ ನಡೆದು ವಿವಿಧ ಮಾರುಕಟ್ಟೆಗೆ ವೀಳ್ಯದೆಲೆ ರವಾನೆಯಾಗುತ್ತಿತ್ತು. ಆದರೆ ಅಲ್ಲಿ ಈಗ ಲಿಲಾವು ನಿಂತಿದೆ. ರೈತರು ವೀಳ್ಯದೆಲೆ ಪೆಂಡಿಗಳನ್ನು ತೆಗೆದುಕೊಂಡು ಹೋದರೂ ಖರೀದಿದಾರರು ಬರುತ್ತಿಲ್ಲ ಎಂದು ರೈತ ಶರಣಬಸಪ್ಪ ಕುಂಬಳಾವತಿ ಬೇಸರ ವ್ಯಕ್ತಪಡಿಸಿದರು.

ಸದ್ಯ ಈಗ ಎಲೆಕೊಯಿಲು ಮಾಡಿದರೂ ಕೂಲಿ ಆಳಿನ ಖರ್ಚು ದೊರೆಯದಂತಾಗಿದೆ. ಚಿಗುರೆಲೆ ಬಳ್ಳಿಯಲ್ಲಿಯೇ ಬಾಡುತ್ತದೆ. ರೈತರು ಕನಿಷ್ಟ ಪಕ್ಷ ಒಂದು ಗುಂಟೆಯಷ್ಟಾದರೂ ಎಲೆಬಳ್ಳಿ ಹೊಂದಿದ್ದಾರೆ. ಗಡಸುತನ ಹೊಂದಿರುವ ಕರಿಎಲೆ ಹಾಗೂ ವೀಳ್ಯದೆಲೆ ಕಟಾವ್ ಮಾಡಿ ಸುತ್ತಲಿನ ಪಟ್ಟಣಗಳಿಗೆ ನಿತ್ಯ ವಹಿವಾಟು ನಡೆಸುತ್ತಾ ಬದುಕು ನಡೆಸುತ್ತಿರುವುದು ಹಿಂದಿನಿಂದಲೂ ಬಂದಿದೆ.

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎಲೆಗಳ ಇಳುವರಿ ಕಡಿಮೆ ಇರುವುದರಿಂದ ರೈತರು ಬಳ್ಳಿ ಇಳಿಸುವುದು, ಪಾತಿ ಮಾಡುವುದು, ಹಳೆ ಬಳ್ಳಿಗಳನ್ನು ಕತ್ತರಿಸಿ ಹೊಸದಾಗಿ ನಾಟಿ ಮಾಡುವುದಕ್ಕೆ ಭೂಮಿ ಸಿದ್ದ ಮಾಡುವುದು, ಒಣಗಿದ ಕಡ್ಡಿಗಳನ್ನು ಕತ್ತರಿಸುವಂತಹ ಕೆಲಸಗಳನ್ನು ನಿಭಾಯಿಸಿದರೂ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ನೋವು ತೋಡಿಕೊಳ್ಳುತ್ತಾರೆ.

‘ಹೋದ ವರ್ಷ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ಬಳ್ಳಿ ನಾಟಿ ಮಾಡೀನ್ರಿ, ನನ್ನ ಕಣ್ಮುಂದ ಬಳ್ಳಿಯಲ್ಲಿ ಎಲೆ ಕೊಯಿಲಾಗದೆ ಬಾಡಿ ಹೋಗುತ್ತಿರುವುದನ್ನು ನೋಡಿದ್ರ ಸಂಕಟ ಆಕೈತ್ರಿ‘ ಎಂದು ಬೆಳೆಗಾರ ಯರಗೇರಾದ ದೇವಪ್ಪ ಹಾಳೂರ ನೋವಿನಿಂದ ಹೇಳುತ್ತಾರೆ.

‘ಈ ಹಿಂದೆ ಒಂದು ಪೆಂಡಿ ಎಲೆಗೆ (3 ಸಾವಿರ ಎಲೆ) ಸ್ಥಳೀಯ ಮಾರುಕಟ್ಟೆಯಲ್ಲಿ ₹ 800 ರಿಂದ ₹ 1000 ವರೆಗಿದ್ದ ಬೆಲೆ ಸದ್ಯ ₹ 300 ಗೆ ಇಳಿದಿದೆ. ನಮಗೆ ಬಡತನ ಎನ್ನುವುದು ಇದ್ದಿಲ್ರಿ, ಈಗ ಎಲೆ ಮಾರಾಟವಾಗದೆ ತೊಂದರೆಯಾಗೈತಿ‘ ಎಂದು ರೈತ ಶರಣಪ್ಪ ಈಳಗೇರ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.