ಕೊಪ್ಪಳ: ‘ವಿದ್ಯೆ ಪಡೆಯಲಾಗದಿದ್ದರೂ ಮಹಾಭಾರತ ಹಾಗೂ ರಾಮಾಯಣವನ್ನು ನಿರರ್ಗಳವಾಗಿ ಕಥೆ ಮೂಲಕ ಹೇಳುತ್ತ ತೊಗಲುಗೊಂಬೆ ಆಟ ಆಡಿಸುವ ಕಲಾವಿದೆ ಭೀಮವ್ವ ಅವರು ಕಲೆಗೆ ಬದುಕನ್ನು ಅರ್ಪಿಸಿಕೊಂಡವರು. ಅವರ ಪಾಲಿಗೆ ಕಲೆಯೇ ದೇವರು’ ಎಂದು ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಹೇಳಿದರು.
ಸೋಮವಾರ ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ ಜರುಗಿದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಭೀಮವ್ವ ಶಿಳ್ಳಿಕ್ಯಾತರ ಅವರ ಅಂಚೆ ಚೀಟಿ ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ‘ಸುದೀರ್ಘ ಬದುಕಿನ ಪಯಣದಲ್ಲಿ ವಿದೇಶಗಳಲ್ಲಿ ಕಲೆ ಪ್ರದರ್ಶಿಸಿದ್ದಾರೆ’ ಎಂದರು.
ಭೀಮವ್ವ ಅವರ ಅಂಚೆ ಚೀಟಿ ಪ್ರಾಯೋಜಿಸಿದ್ದ ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿ ‘ಬಸ್‌ಗಳ ಸೌಕರ್ಯಗಳೇ ಇಲ್ಲದ ಕಾಲದಲ್ಲಿ ಗ್ರಾಮಗಳಿಗೆ ನಡೆದುಕೊಂಡು ಹೋಗಿ ಬದುಕಿನ ಅತ್ಯಂತ ಕಷ್ಟದ ಕಾಲದಲ್ಲಿಯೂ ತೊಗಲುಗೊಂಬೆ ಆಟದ ಪ್ರದರ್ಶನ ಮಾಡಿ ಕಲಾನಿಷ್ಠೆ ತೋರಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಪ್ಪಳದ ಅಂಚೆ ವಿಭಾಗೀಯ ಅಧೀಕ್ಷಕ ಎನ್.ಜಿ. ಬಂಗಿಗೌಡರ, ಪ್ರಧಾನ ಅಂಚೆ ಕಚೇರಿ ಪಾಲಕ ಬಿ. ನಾಗರಾಜ, ತೇಜಸ್ವಿನಿ, ಜಿ.ಎನ್. ಹಳ್ಳಿ, ಸಕ್ರಪ್ಪ ಹೂಗಾರ, ರವಿ ಕಾಂತನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.