ADVERTISEMENT

ದೀಪಾವಳಿ 'ಹಟ್ಟಿ' ಹಬ್ಬದ ಸಂಭ್ರಮ

ಕುರಿ, ಮೇಕೆಗಳೇ 'ಲಕ್ಷ್ಮಿ': ಕುರಿಗಾರರಿಗೆ ಸಂಭ್ರಮದ ಹಬ್ಬ

ಸಿದ್ದನಗೌಡ ಪಾಟೀಲ
Published 12 ನವೆಂಬರ್ 2020, 14:15 IST
Last Updated 12 ನವೆಂಬರ್ 2020, 14:15 IST
ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯಲ್ಲಿ ದೀಪಾವಳಿ ನಿಮಿತ್ತ ಹಟ್ಟಿ ಹಬ್ಬದಲ್ಲಿ ಸಂಭ್ರಮದಿಂದ ತೊಡಗಿರುವ ಕುರಿಗಾರರು (ಸಂಗ್ರಹ ಚಿತ್ರ)
ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯಲ್ಲಿ ದೀಪಾವಳಿ ನಿಮಿತ್ತ ಹಟ್ಟಿ ಹಬ್ಬದಲ್ಲಿ ಸಂಭ್ರಮದಿಂದ ತೊಡಗಿರುವ ಕುರಿಗಾರರು (ಸಂಗ್ರಹ ಚಿತ್ರ)   

ಕೊಪ್ಪಳ: ಗ್ರಾಮೀಣ ಜನರ ಬದುಕಿಗೆ ಬೆಳಕಾದ ಜಾನುವಾರುಗಳು ಕೇಳಿದ್ದನ್ನು ಕರುಣಿಸುವ ‘ಕಾಮಧೇನು’. ರೈತರ ಪಾಲಿನ ಸಾಕ್ಷಾತ್‌ ಲಕ್ಷ್ಮಿ. ಹಾಗಾಗಿಯೇ ದೀಪಾವಳಿ ಹಬ್ಬದಂದು ಲಕ್ಷ್ಮಿ ಸ್ವರೂಪದಲ್ಲಿ ಪೂಜಿಸಿ, ಆರಾಧಿಸುವ ಸಂಪ್ರದಾಯ ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಇದೆ. ವಿಶೇಷವಾಗಿ ಕುರಿಗಾಹಿಗಳು ಹಟ್ಟಿ ಪೂಜೆ ಮಾಡುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಬಲಿಪಾಡ್ಯಮಿ ದಿನ ಕುರಿಗಳನ್ನು ಶುಭ್ರಗೊಳಿಸಿ, ವಿಶೇಷವಾಗಿ ಪೂಜೆ ಮಾಡಿ, ಹಬ್ಬದ ಅಡುಗೆಯನ್ನು ಮಾಡಿ, ಯಾವುದೇ ಕಾಯಿಲೆ ಬಾರದೇ ಲಕ್ಷ್ಮಿರೂಪದಲ್ಲಿ ನಮ್ಮನ್ನು ಕಾಪಾಡಬೇಕು ಎಂಬ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸುತ್ತಾರೆ.

ಕೊಪ್ಪಳ ಮತ್ತು ದೂರದ ಬೆಳಗಾವಿ ಜಿಲ್ಲೆಯ ಕುರಿಗಾರರು ಮೇವು, ನೀರು ಅರಸುತ್ತಾ ಈ ಭಾಗದಲ್ಲಿ ಬೀಡು ಬಿಡುವುದು ಸಾಮಾನ್ಯವಾಗಿದೆ. ಊರು ಮತ್ತು ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಇದ್ದರೂ ತಮ್ಮ ಕುರಿ ಮಂದೆ ಇರುವ ಹಟ್ಟಿಯಲ್ಲಿಯೇ ಈ ಹಬ್ಬವನ್ನು ಆಚರಿಸುತ್ತಾರೆ.

ADVERTISEMENT

ಹಟ್ಟಿಯನ್ನು ಸ್ವಚ್ಛಗೊಳಿಸಿ, ಅದರಲ್ಲಿ ರಂಗೋಲಿ ಹಾಕಿ. ಬಾಳೆ, ಕಬ್ಬು, ಮಾವಿನ ತಳಿರುತೋರಣ, ವಿಶೇಷವಾಗಿ ಚೆಂಡು ಹೂವುಗಳ ಹಾರವನ್ನು ಹಾಕಿ ಅಲಂಕಾರ ಮಾಡಲಾಗುತ್ತದೆ. ಕಂಬಳಿಯ ಮೇಲೆ ಕುಂಭವನ್ನಿಟ್ಟು ಹಟ್ಟಿ ಹಾಗೂ ಕುರಿಗಳಿಗೆ ಪೂಜೆ ಸಲ್ಲಿಸಿ, ಹಾಲು ಉಕ್ಕಿಸಿ ತಮ್ಮ ಕುರಿಗಳನ್ನು ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನ ಪಾಯಸ, ಬುಂದಿ, ಸಿರಾ, ಹುಗ್ಗಿ ಸೇರಿದಂತೆ ವಿವಿಧ ಸಿಹಿ ಭೋಜನ ತಯಾರಿಸಲಾಗುತ್ತದೆ. ಮನೆಯವರು, ಬಂಧುಗಳು, ಸುತ್ತಮುತ್ತಲಿನವರ ಜತೆ ಊಟ ಸವಿಯುತ್ತಾರೆ.

'ಈ ಹಬ್ಬವನ್ನೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಎಲ್ಲ ಜನರನ್ನು ಹಾಗೂ ಕುರಿಗಳನ್ನು ಆರೋಗ್ಯಯುತವಾಗಿ ಇಡಬೇಕು. ಸಂಪತ್ತು ನೀಡಿ ಉತ್ತಮ ರೀತಿಯ ಜೀವನ ದಯಪಾಲಿಸಬೇಕು ಎನ್ನುವ ಉದ್ದೇಶದಿಂದ ಈ ಹಟ್ಟಿ ಹಬ್ಬಮಾಡುತ್ತಾರೆ' ಎಂದು ಕುರಿಗಾಹಿ ಸಿದ್ದಪ್ಪ ಕಳ್ಳಿಮನಿ ಹೇಳುತ್ತಾರೆ.

ವರ್ಷಪೂರ್ತಿ ನಡೆಯುವ ಎಲ್ಲ ಹಬ್ಬಗಳಿಗಿಂತಲೂ ವಿಶೇಷವಾಗಿ ಈ ಹಬ್ಬವನ್ನು ಕುರಿಗಾಹಿಗಳು ಆಚರಿಸುತ್ತಾರೆ. ವಿವಿಧ ಹಬ್ಬಗಳ ದಿನದಂದು ತಾವು ಕುರಿ ಮೇಯಿಸುತ್ತಾ ವಿವಿಧ ಪ್ರದೇಶಗಳಿಗೆ ತೆರಳಿರುತ್ತಾರೆ. ಹಾಗಾಗಿ ಎಲ್ಲ ಹಬ್ಬಗಳನ್ನು ಉತ್ತಮವಾಗಿ ಆಚರಿಸಲಾಗುವುದಿಲ್ಲ.

ಅದಕ್ಕಾಗಿ ಈ ಹಬ್ಬ ತಮಗೆ ಆದಾಯದ ಮೂಲವಾಗಿರುವ, ತಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಕುರಿಗಳನ್ನು ಲಕ್ಷ್ಮೀ ಎಂದು ಎಲ್ಲ ಕುರಿಗಾಹಿಗಳು ಭಾವಿಸಿದ್ದಾರೆ. ಅದಕ್ಕಾಗಿ ಅವುಗಳಿಗೆ ಮತ್ತು ಅವುಗಳ ವಾಸಸ್ಥಾನವಾದ ಹಟ್ಟಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ದೀಪಾವಳಿಯನ್ನು ಅವರು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.

ಜಿಲ್ಲೆಯ ಹಂದ್ರಾಳ, ಸೇರಿದಂತೆ ಕುರಿಹಟ್ಟಿ ಇರುವ ಹಾಗೂ ಕುರಿ ಸಾಕಣೆ ಮಾಡುವ ಎಲ್ಲರೂ ಈ ಹಬ್ಬವನ್ನೂ ಬಹಳಷ್ಟು ವಿವಿಧ ಹಳ್ಳಿಗಳಲ್ಲಿ ವಿಶೇಷವಾಗಿ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.