ಗಂಗಾವತಿ: ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳ ಚುನಾವಣೆಯಲ್ಲ. ಇದು ಫ್ಯಾಸಿಸಂ ವಿರುದ್ಧ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿನ ಕುರಿತ ಚುನಾವಣೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಎಂ.ಎಲ್) ಲಿಬರೇಷನ್ನ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಜಾತಿ, ಧರ್ಮಗಳ ನಡುವೆ ಕೋಮುದ್ವೇಷ ಕೆರಳಿಸಿ, ಜನರ ದಿಕ್ಕು ತಪ್ಪಿಸಿ, ಜನರಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಶ್ರಮಿಕ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಯುವಕರಿಗೆ ಉದ್ಯೋಗವಿಲ್ಲ, ರೈತರ ಆದಾಯ ದ್ವಿಗುಣವಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದರೂ, ಪ್ರಧಾನಿ ಮೋದಿ ಕಿಂಚಿತ್ತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದೀಗ ಒಂದೇ ಧರ್ಮ, ರಾಷ್ಟ್ರ, ಭಾಷೆ, ಸಂಸ್ಕೃತಿ, ಪಕ್ಷವೆಂದು ದೇಶವನ್ನ ಏಕಪಕ್ಷೀಯವಾಗಿಸಲು ನಿರ್ಧರಿಸಿದ್ದು ಖಂಡನೀಯ. ಚುನಾವಣೆಯಲ್ಲಿ ಜನರು ಬಿಜೆಪಿಗೆ ಬೆಂಬಲಿಸಬಾರದು ಎಂದರು.
ಪಕ್ಷದ ಕೇಂದ್ರ ಸದಸ್ಯೆ ಮೈತ್ರಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಇಂಡಿಯಾ ಒಕ್ಕೂಟದ ಮೈತ್ರಿ ಭಾಗವಾಗಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಿಂದ ನಾಲ್ವರು ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದು, ನಮ್ಮ ಉದ್ದೇಶ ಪ್ರಜಾಪ್ರಭುತ್ವ ಉಳಿಸಿ, ಬಿಜೆಪಿ ಸೋಲಿಸುವುದಾಗಿದೆ. ಹಾಗಾಗಿ ಜನ ವಿರೋಧಿ ಬಿಜೆಪಿ ಪಕ್ಷ ಸೋಲಿಸಿ, ಕಾಂಗ್ರೆಸ್ಸಿಗೆ ಮತ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದರು.
ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು, ಕಟ್ಟಡ ಕಾರ್ಮಿಕ ಸಂಘಟನೆಯ ಚಾಂದ್ ಪಾಷ, ಸಣ್ಣ ಹನುಮಂತಪ್ಪ ಭಾಗಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.