ಕುಷ್ಟಗಿ: ‘ಪಟ್ಟಣದಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಬೇಡಿಕೆಗೆ ಸಂಬಂಧಿಸಿದಂತೆ ಮುಂದಿನ ವರ್ಷದ ಬಜೆಟ್‌ದಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕೇಂದ್ರದ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ ಜೋಷಿ ಹೇಳಿದರು.
ಈಚೆಗೆ ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿಯಾದ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ ಅವರು,‘ಒಂದು ವೇಳೆ ಹೊಸ ಮಾರ್ಗ ಸೇರ್ಪಡೆಗೆ ಸಾಧ್ಯವಾಗುವುದಾದರೆ ಆ ನಿಟ್ಟಿನಲ್ಲೂ ಪ್ರಯತ್ನ ನಡೆಸುವುದಾಗಿ ಹೇಳಿದರು.
ಈ ರೈಲ್ವೆ ಮಾರ್ಗ ಕುರಿತು ಸಚಿವ ಜೋಷಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಇತರರು, ಈ ಮಾರ್ಗ ನಿರ್ಮಾಣಗೊಂಡರೆ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸೇತು ಆಗಲಿದೆ. ಕೃಷಿ, ತೋಟಗಾರಿಕೆ ಉತ್ಪನ್ನ ವಾಣಿಜ್ಯ ವಹಿವಾಟು, ಸರಕು ಸಾಗಾಣಿಕೆಯಿಂದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಿ ಆದಾಯವೂ ದ್ವಿಗುಣಗೊಳ್ಳಬಹುದು. ಅಲ್ಲದೆ ಪ್ರಯಾಣ, ಸರಕು ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಸೇತು ಆಗುವುದಿರಂದ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಜನರಿಗೆ ಹೆಚ್ಚಿನ ಅನಕೂಲವಾಗುತ್ತದೆ ಎಂದು ವಿವರಿಸಿದರು.
ಅದೇ ರೀತಿ ಗದಗ-ವಾಡಿ, ಆಲಮಟ್ಟಿ-ಚಿತ್ರದುರ್ಗ, ಗದಗ-ಕೃಷ್ಣಾವರಂ, ದರೋಜಿ-ಬಾಗಲಕೋಟೆ ಹೊಸ ರೈಲ್ವೆ ಮಾರ್ಗಗಳ ಅನುಷ್ಠಾನದಿಂದ ಆಗುವ ಕುರಿತು ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ರೈಲ್ವೆ ಹೋರಾಟ ಸಮಿತಿ ಪ್ರಧಾನಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಕೆ.ಮಹೇಶ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.