ADVERTISEMENT

ಯಲಬುರ್ಗಾ | ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:22 IST
Last Updated 19 ಜುಲೈ 2024, 14:22 IST
ಯಲಬುರ್ಗಾ ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಯಲಬುರ್ಗಾ ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಯಲಬುರ್ಗಾ: ಕರ್ನಾಟಕದಲ್ಲಿ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಹಾಗೂ ವಿವಿಧ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ 75ಕ್ಕೂ ಅಧಿಕ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ವಿಧೇಯಕವನ್ನು ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ವಿವಿಧ ಬೀದಿಗಳಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನ ಕಲ್ಯಾಣ ವೇದಿಕೆಯ ಮುಖಂಡ ಸ. ಶರಣಪ್ಪ ಪಾಟೀಲ ಮಾತನಾಡಿ, ‘ಕನ್ನಡ ನೆಲದಲ್ಲಿನ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗುತ್ತಿರುವ ಉದ್ಯಮೆದಾರರು ಕನ್ನಡಿಗರಿಗೆ ಉದ್ಯೋಗ ಕೊಡುವಲ್ಲಿ ವಿಫಲರಾದರೆ ಅಂತ ಉದ್ಯಮಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿಕೊಡಬಾರದು. ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ರೀತಿಯಲ್ಲಿ ಇಲ್ಲಿಯ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಬೇಕು. ಮುಖ್ಯವಾಗಿ ಪ್ರಸ್ತುತ ಚರ್ಚೆಯಲ್ಲಿರುವ ವಿದೇಯಕದಲ್ಲಿ ವಿವಿಧ ಹಂತದಲ್ಲಿ ಶೇ 75ರಷ್ಟು ಮೀಸಲಾತಿ ಕಡ್ಡಾಯವಾಗಿ ಸೇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕರವೇ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ‘ಕನ್ನಡ ಹಿತಕಾಪಾಡುವಲ್ಲಿ ಮುಖ್ಯಮಂತ್ರಿಗೆ ವಿಶೇಷ ಆಸಕ್ತಿ ತೋರಬೇಕು. ಉದ್ಯಮಿಗಳ ಹಾಗೂ ರಾಜಕಾರಣಿಗಳ ಒತ್ತಡಕ್ಕೆ ಒಳಗಾಗದೇ ಕನ್ನಡಿಗರ ಉದ್ಯೋಗ ಮತ್ತು ಅವರ ಅಭ್ಯುದಯಕ್ಕೆ ಕನ್ನಡಿಗರ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುವಂತೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಮುಖಂಡರಾದ ಭೀಮೇಶ ಬಂಡಿವಡ್ಡರ, ರಾಮನಗೌಡ ಪಾಟೀಲ, ಶಿವಕುಮಾರ ನಿಡಗುಂದಿ, ಘನವಂತಪ್ಪ, ವೀರೇಶ, ಶ್ರೀಧರ ಸೂರಕೊಡ, ಮಂಜುನಾಥ ಕಮ್ಮಾರ, ಶ್ರೀಕಾಂತ ಬಣಕಾರ, ಚನ್ನಬಸಯ್ಯ, ವಿಜಯಕುಮಾರ, ಬಸವರಾಜ ಮಾಳಗಿ ಸೇರಿ ಅನೇಕರು ಇದ್ದರು. ಉಪ ತಹಶೀಲ್ದಾರ್‌ ವಿಜಯಕುಮಾರ ಗುಂಡೂರ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.