ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹187 ಕೋಟಿಯನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಂಚಿಕೊಂಡಿರುವ ಆರೋಪವಿದ್ದು ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಘಟಕ ಆಗ್ರಹಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಡೊಣ್ಣಿ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನಿಗಮದಲ್ಲಿ ಹಲವು ವರ್ಷಗಳಿಂದ ಸೌಲಭ್ಯ ಪಡೆದುಕೊಳ್ಳಲು ಸಲ್ಲಿಸಿದವರ ಅರ್ಜಿಗಳು ಇತ್ಯರ್ಥವಾಗಿಲ್ಲ. ಇಲ್ಲದ ಕಾರಣಗಳನ್ನು ನೀಡಿ ಅಧಿಕಾರಿಗಳು ಅರ್ಜಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸಮುದಾಯದ ಪರಮಶತ್ರುಗಳಿಂದ ಇದುವರೆಗೆ ಪರಿಶಿಷ್ಟರ ಜೀವನಮಟ್ಟ ಸುಧಾರಣೆ ಮಾಡಿಲ್ಲ’ ಎಂದು ಆರೋಪಿಸಿದರು.
‘ಸಮುದಾಯದ ಜನರ ಶ್ರೇಯೋಭಿವೃದ್ಧಿಗಾಗಿ ಮೀಸಲಿರುವ ಹಣವನ್ನು ಸರಿಯಾಗಿ ಸಮುದಾಯದ ಜನರಿಗೆ ತಲುಪುತ್ತಿಲ್ಲ. ವಾಲ್ಮೀಕಿ ಸಮುದಾಯದವರು ಅದೇ ಖಾತೆ ಖಾತೆಗೆ ಸಚಿವರಾಗಿದ್ದಾಗ ಖುಷಿಪಟ್ಟಿದ್ದೆವು. ಆದರೆ ಈಗ ಅದೇ ಸಮುದಾಯದ ವ್ಯಕ್ತಿ ನಮ್ಮ ಏಳಿಗೆಗೆ ಉರುಳಾಗಿದ್ದು ಮಾತ್ರ ವಿಪರ್ಯಾಸ. ರಾಜ್ಯ ಸರ್ಕಾರ ಪ್ರಕರಣದಲ್ಲಿ ನಾಪತ್ತೆಯಾದ ಎಲ್ಲ ಹಣವನ್ನು ವಶಪಡಿಸಿಕೊಂಡು ಸಮುದಾಯದ ಜನರ ಅಭಿವೃದ್ಧಿಗೆ ಖರ್ಚು ಮಾಡಬೇಕು. ಸಾಲ ಸೌಲಭ್ಯ ವ್ಯವಸ್ಥೆಯಲ್ಲಿ ಶಾಸಕರು ಹಸ್ತಕ್ಷೇಪ ಮಾಡದಂತೆ ಅವರ ಸುಪರ್ದಿಗೆ ವಹಿಸದೇ ನೇರ ಸಾಲ ಮೂಲಕ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಆಗ್ರಹಿಸಿದರು.
‘ಪ್ರತಿ ವರ್ಷ ಪರಿಶಿಷ್ಟ ಪಂಗಡದ ಜನತೆಯ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರ್ಬಳಕೆ ಆಗದ ಹಾಗೆ ನೋಡಿಕೊಳ್ಳಬೇಕು, ನಿಗಮದ ಕೆಲಸ ಪಾರದರ್ಶಕತೆಯಿಂದ ನಡೆಯಲು ಕಟ್ಟುನಿಟ್ಟಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮಹಾಸಭಾದ ತಾಲ್ಲೂಕು ಅಧ್ಯಕ್ಷ ಶರಣಪ್ಪ ನಾಯಕ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಕಲ್ಲಣ್ಣನವರ ಹಾಗೂ ಮೇಟಿ ಹುಲಗೇಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.