ADVERTISEMENT

ಡೆಂಗಿ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು: ಟಿ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:21 IST
Last Updated 14 ಆಗಸ್ಟ್ 2025, 6:21 IST
ಯಲಬುರ್ಗಾ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ತಾ.ಪಂ ಇಒ ಸಂತೋಷ ಪಾಟೀಲ ಬಿರಾದಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು
ಯಲಬುರ್ಗಾ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ತಾ.ಪಂ ಇಒ ಸಂತೋಷ ಪಾಟೀಲ ಬಿರಾದಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು   

ಯಲಬುರ್ಗಾ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ಡೆಂಗಿ ಜ್ವರ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ತ್ವರಿತವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಆರೋಗ್ಯ ಇಲಾಖೆಯ ವರದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ಗೆದಗೇರಿ, ಬನ್ನಿಗೋಳ, ಗುನ್ನಾಳ, ಬನ್ನಿಕೊಪ್ಪ ಸೇರಿದಂತೆ ವಿವಿಧ ಗ್ರಾಮದಲ್ಲಿ ಡೆಂಗಿ ಜ್ವರ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಾಸೀನ ಮಾಡದೇ ಹೆಚ್ಚಿನ ಆಸಕ್ತಿವಹಿಸಿ ಪಂಚಾಯಿತಿ ಮುಖ್ಯಸ್ಥರು ಹಾಗೂ ಆರೋಗ್ಯ ಇಲಾಖೆಯರುವ ಸೇರಿ ಫಾಗಿಂಗ್, ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಕೈಗೊಳ್ಳುವುದು, ಜನರಲ್ಲಿ ಅರಿವು ಮೂಡಿಸುವುದು ಹೀಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಾಡಿಕೆ ಮಳೆಗಿಂತಲೂ ಅಧಿಕ ಮಳೆಯಾಗಿದ್ದರಿಂದ ವಿವಿಧೆಡೆ ಬೆಳೆ ನಾಶವಾಗಿದ್ದು ಕಂಡುಬಂದಿದೆ. ಯೂರಿಯಾ ಗೊಬ್ಬರ ಸದ್ಯಕ್ಕೆ ಕೊರತೆಯಿಲ್ಲ, ಬೇಡಿಕೆಗೆ ಅನುಗುಣವಾಗಿ ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಲಾಗಿದೆ. ಇನ್ನೂ ಎರಡೂವರೆ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ತಾಲ್ಲೂಕಿಗೆ ಬರುತ್ತಿದೆ. ನ್ಯಾನೊ ಗೊಬ್ಬರ ಲಭ್ಯತೆ ಮತ್ತು ಅದರ ಪ್ರಯೋಜನದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಡ್ರೋನ್ ಮೂಲಕ ಸಿಂಪರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 500 ಕೃಷಿಹೊಂಡಗಳ ನಿರ್ಮಾಣದ ಗುರಿಯಿದೆ. ಹಳೆಯ ಹೊಂಡಗಳು ಭರ್ತಿಯಾಗಿವೆ’ ಎಂದು ಕೃಷಿ ಅಧಿಕಾರಿ ಪ್ರಮೋದ ಸಭೆಯ ಗಮನಕ್ಕೆ ತಂದರು.

ADVERTISEMENT

ಶಿಥಿಲಾವಸ್ಥೆಯಲ್ಲಿರುವ ವಸತಿನಿಲಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಉದಾಸೀನ ಮಾಡುವ ಮೂಲಕ ಆನಾಹುತಗಳಿಗೆ ಅವಕಾಶ ಮಾಡಿಕೊಡಬಾರದು, ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳಬೇಕು. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ಬಗೆಹರಿಸಿಕೊಳ್ಳಬೇಕು ಅಧಿಕಾರಿಗಳಿಗೆ ಎಂದು ಉಪಕಾರ್ಯದರ್ಶಿ ಸಲಹೆ ನೀಡಿದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ, ತೋಟಗಾರಿಕೆ ಇಲಾಖೆಯ ಅಧಿಕಾರಿ ಎಂ. ನಿಂಗನಗೌಡ, ಪಶುವೈದ್ಯಾಧಿಕಾರಿ ಪ್ರಕಾಶ ಚೂರಿ ಸೇರಿ ಇತರರು ಆಯಾ ಇಲಾಖೆಗಳ ಕುರಿತು ಮಾಹಿತಿ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು. ತಾ.ಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪಾಟೀಲ, ಫಕೀರಪ್ಪ ಕಟ್ಟಿಮನಿ ಸೇರಿ ಅನೇಕರು ಇದ್ದರು.

ಗುರುತಿನ ಚೀಟಿ ಧರಿಸದ ನೌಕರರು

ಕರ್ನಾಟಕ ರಾಜ್ಯೋತ್ಸವದ 75ನೇ ವರ್ಷದ ಆಚರಣೆ ಪ್ರಯುಕ್ತ ಸರ್ಕಾರಿ ನೌಕರರು ಕರ್ತವ್ಯದ ವೇಳೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಯ ಕೊರಳ ಪಟ್ಟಿಯೊಂದಿಗೆ ಗುರುತಿನ ಚೀಟಿಯನ್ನು ಧರಿಸಿರಬೇಕೆಂಬುದು ಸರ್ಕಾರದ ಆದೇಶವಿದೆ. ಆದರೆ ಕೇವಲ ಬೆರಳೆಣಿಕೆಯಷ್ಟು ನೌಕರರ ಕೊರಳಲ್ಲಿ ಕಾಣಿಸಿದ್ದನ್ನು ಬಿಟ್ಟರೆ ಬಹುತೇಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಯು ಗುರುತಿನ ಚೀಟಿಯ ಕೊರಳಪಟ್ಟಿ ಧರಿಸಿರಲಿಲ್ಲ. ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಿದ ತಾ.ಪಂ ಇಒ ಸಂತೋಷ ಪಾಟೀಲ ಜಿಲ್ಲಾ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೂಡಾ ಧರಿಸಿರಲಿಲ್ಲ. ಹಾಗೆಯೆ ಇಬ್ಬರು ಪಿಡಿಒಗಳು ಬಿಟ್ಟರೆ ಉಳಿದ ಯಾರೊಬ್ಬರ ಕೊರಳಲ್ಲಿಯೂ ಗುರುತಿನ ಚೀಟಿ ಕಾಣಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.